ನವಕೇರಳ ಬಸ್ಸಿನ ಮೇಲೆ ಚಪ್ಪಲಿ ಎಸೆತ: ಕೆ.ಎಸ್.ಯು ಕಾರ್ಯಕರ್ತರ ವಿರುದ್ಧ ನರಹತ್ಯಾ ಯತ್ನ ಪ್ರಕರಣ: ನಾಲ್ವರ ಸೆರೆ
ಕೊಚ್ಚಿ: ಪೆರುಂಬಾವೂರಿನಲ್ಲಿ ನವಕೇರಳ ಯಾತ್ರೆಯಲ್ಲಿ ಭಾಗವಹಿಸಲೆಂದು ಮುಖ್ಯಮಂತ್ರಿ ಮತ್ತು ಇತರ ಸಚಿವರುಗಳು ಸಂಚರಿಸುತ್ತಿದ್ದ ಬಸ್ಸಿಗೆ ಕೆಎಸ್‌ಯು ಕಾರ್ಯಕರ್ತರು ಚಪ್ಪಲಿ ಎಸೆದಿದ್ದು, ಅದಕ್ಕೆ ಸಂಬಂಧಿಸಿ ಕೆಎಸ್‌ಯುನ ಹಲವು ಕಾರ್ಯಕರ್ತರ ವಿರುದ್ಧ ಪೊಲೀಸರು ನರಹತ್ಯಾಯತ್ನ ಮತ್ತು ಇತರ ಹಲವು ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಈ ಪ್ರಕರಣಕ್ಕೆ ಸಂಬಂಧಿಸಿ ಜಿಬಿನ್‌ದೇವಕುಮಾರ್, ಜೈಡನ್, ಬೇಸಿಲ್ ವರ್ಗೀಸ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾದ ವರ್ಗೀಸ್ ಕೆಎಸ್‌ಯು ರಾಜ್ಯ ಕಾರ್ಯದರ್ಶಿಯಾಗಿದ್ದಾರೆ.
ಮುಖ್ಯಮಂತ್ರಿ ಮತ್ತು ಸಚಿವರು ಸಂಚರಿಸುತ್ತಿದ್ದ ಬಸ್ಸಿಗೆ ನಿನ್ನೆ ಸಂಜೆ ಪೆರುಂಬಾವೂರಿಗೆ ಸಮೀಪದ ಒಡಯಿಕ್ಕಾಲ್ ಎಂಬಲ್ಲಿ ಚಪ್ಪಲಿ ಎಸೆತವುಂಟಾಗಿತ್ತು. ಆಗ ಅಲ್ಲಿ ಜಮಾಯಿಸಿದ್ದ ಸಿಪಿಎಂ ಕಾರ್ಯ ಕರ್ತರು ಅದನ್ನು ಪ್ರಶ್ನಿಸಿ, ಅದು ಭಾರೀ ಘರ್ಷಣೆ ಸೃಷ್ಟಿಸಿ ಅದರಲ್ಲಿ ಕೆಎಸ್ ಯುನ ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.