ನವಕೇರಳ ಸಭೆ : ಯಾತ್ರೆ ಮಧ್ಯೆ ಸಿಎಂ ವಿರುದ್ಧ ಕಪ್ಪು ಪತಾಕೆ ಪ್ರದರ್ಶನ; ಯೂತ್ ಕಾಂಗ್ರೆಸ್, ಕೆ.ಎಸ್.ಯುನ ಏಳು ಮಂದಿಗೆ ಮಾರಣಾಂತಿಕ ಹಲ್ಲೆ
ಕಣ್ಣೂರು: ಜಿಲ್ಲೆಯ ಕಲ್ಯಾಶ್ಶೇರಿ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ ನಡೆದ ನವಕೇರಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು ತಳಿಪರಂಬಕ್ಕೆ ಹೋಗುತ್ತಿರುವ ದಾರಿ ಮಧ್ಯೆ ಪಳಯಂಗಾಡಿ ಎರಿಪುರಂ ಕೆ.ಎಸ್.ಇ.ಬಿ ಕಚೇರಿ ಬಳಿಯ ರಸ್ತೆ ಬದಿ ಯೂತ್ ಕಾಂಗ್ರೆಸ್ ಮತ್ತು ಕೆಎಸ್‌ಯುನ ಏಳು ಮಂದಿ ಕಾರ್ಯಕರ್ತರು ನಿನ್ನೆ ಸಂಜೆ ಸುಮಾರು ೫ ಗಂಟೆಯ ವೇಳೆಗೆ ಮುಖ್ಯಮಂತ್ರಿ ವಿರುದ್ಧ ಕಪ್ಪು ಪತಾಕೆ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಆ ವೇಳೆ ಅಲ್ಲಿದ್ದ ಡಿವೈಎಫ್‌ಐ, ಎಸ್‌ಎಫ್‌ಐ ಮತ್ತು ಸಿಪಿಎಂ ಕಾರ್ಯಕರ್ತರು ಸೇರಿ ಪ್ರತಿಭಟನಾಗಾ ರರನ್ನು ತಡೆದು ನಿಲ್ಲಿಸಿ ಅವರ ಮೇಲೆ ಎರಗಿ ಹಿಗ್ಗಾಮುಗ್ಗವಾಗಿ ಥಳಿಸಿ ಹಲ್ಲೆ ನಡೆಸಿ ಗಾಯಗೊಳಿಸಿದರೆಂದು ಆರೋಪಿಸಲಾಗಿದೆ. ಪ್ರತಿಭಟನೆಗಾರರನ್ನು ಪೊಲೀಸರು ಸೇರಿ ರಕ್ಷಿಸಿ ಪೊಲೀಸ್ ಠಾಣೆಗೆ ಒಯ್ದರು. ಆಗ ಅಲ್ಲೂ ಘರ್ಷಣೆ ಮುಂದುವರಿದಿದೆ. ಆಗ ಓರ್ವ ಅಲ್ಲಿದ್ದ ಹೂ ಕುಂಡವನ್ನು ತೆಗೆದು ಅದರಿಂದ ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸುಧೀಶ್ ವೆಳ್ಳಾಚಾಲ್ (೩೦)ರ ತಲೆಗೆ ಬಡಿದನೆಂದು ಆರೋಪಿಸಲಾಗಿದೆ. ತಲೆಗೆ ಗಂಭೀರ ಗಾಯಗೊಂಡ ಸುಧೀಶ್‌ನನ್ನು ತಲಶ್ಶೇರಿ ಇಂದಿರಾ ಗಾಂಧಿ ಸಹಕಾರಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಇದರ ಹೊರತಾಗಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕಲ್ಯಾಶ್ಶೇರಿ ಬ್ಲೋಕ್ ಉಪಾಧ್ಯಕ್ಷ ರಾಹುಲ್ ಪುತ್ತನ್ ಪುರೆಯಿಲ್ (೩೦), ಕೆಎಸ್‌ಯುನ ಮಾಡಾಯಿ ಕಾಲೇಜ್ ಯೂನಿಯನ್ ಅಧ್ಯಕ್ಷ ಸಾಯಿ ಶರಣ್ ವೇಂಙರ (೨೦), ಕೆಎಸ್‌ಯು ಬ್ಲೋಕ್ ಕಾರ್ಯದರ್ಶಿ ಸಂಜು ಸಂತೋಷ್ (೧೯), ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಮಹಿತಾ ಮೋಹನ್ (೩೫), ಯೂತ್ ಕಾಂಗ್ರೆಸ್ ಕಲ್ಯಾಶೇರಿ ಬ್ಲೋಕ್ ಅಧ್ಯಕ್ಷ ರಾಹುಲ್ ಪೂಂಗಾವು (೩೧) ಮತ್ತು ಮಿಥುನ್ ಕಳಪೂಳಂ (೨೦) ಎಂಬವರೂ ಗಾಯಗೊಂಡಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾತ್ರವಲ್ಲ ಇದಾದ ಬಳಿಕ ಎರಿಪುರಂ ತಿರುವಿನಲ್ಲಿ ಬಿಬಿಎ ದ್ವಿತೀಯ ವರ್ಷ ವಿದ್ಯಾರ್ಥಿ ವಿನೋದ್ ವೇಂಙರ (೧೮) ಎಂಬಾತನನ್ನು ಡಿವೈಎಫ್‌ಐ ಸಿಪಿಎಂ ಕಾರ್ಯಕರ್ತರ ತಂಡ ತಡೆದು ನಿಲ್ಲಿಸಿ ಹಲ್ಲೆ ನಡೆಸಿ ಆತನ ಬೈಕ್ ಹಾನಿಗೊಳಿಸಿರುವುದಾಗಿ ದೂರಲಾಗಿದೆ.