ನವಜಾತ ಶಿಶುಗಳ ಕೊಲೆ: ಮಕ್ಕಳನ್ನು ಹೂತುಹಾಕಿದ ಹೊಂಡ ತೆರೆದು ಫಾರೆನ್ಸಿಕ್ ತಪಾಸಣೆ
ತೃಶೂರು: ಇಲ್ಲಿನ ಪುದುಕ್ಕಾಡ್‌ನಲ್ಲಿ ಅವಿವಾಹಿತರಾದ ಜೋಡಿ ನವಜಾತ ಶಿಶುಗಳನ್ನು ಕೊಲೆಗೈದ ಪ್ರಕರಣದಲ್ಲಿ ಹೂತುಹಾಕಿದ ಸ್ಥಳವನ್ನು ತೆರೆದು ಇಂದು ಪರಿಶೀಲಿಸಲಾಗುವುದು. ಮೊದಲ ಮಗುವನ್ನು ಹೂತುಹಾಕಿದ ಒಂದನೇ ಆರೋಪಿ ಅನಿಶಾಳ ಮನೆಯ ಪರಿಸರ ಹಾಗೂ ದ್ವಿತೀಯ ಮಗುವನ್ನು ಹೂತುಹಾಕಿದ ಎರಡನೇ ಆರೋಪಿ ಭವಿನ್‌ನ ಮನೆಯ ಪರಿಸರವನ್ನು ಫಾರೆನ್ಸಿಕ್ ತಂಡ ತಪಾಸಣೆ ನಡೆಸಲಿದೆ. ಈ ಮೊದಲು ಇವರಿಬ್ಬರನ್ನು ಮನೆಗೆ ಕರೆದುಕೊಂಡು ಬಂದು ಹೇಳಿಕೆ ದಾಖಲಿಸಲಾಗಿತ್ತು.
ಆದಿತ್ಯವಾರ ಮುಂಜಾನೆ 12.30ರ ವೇಳೆ ಆಂಬಲ್ಲೂರು ನಿವಾಸಿ ಭವಿನ್ ನವಜಾತ ಶಿಶುಗಳ ಅಸ್ಥಿಯೊಂದಿಗೆ ಪೊದುಕ್ಕಾಡ್ ಪೊಲೀಸ್ ಠಾಣೆಗೆ ತಲುಪಿರುವುದರೊಂದಿಗೆ ಈ ಪ್ರಕರಣ ಬಹಿರಂಗಗೊಂಡಿದೆ. ಗೆಳತಿಯಾದ ಯುವತಿಗೆ ಜನಿಸಿದ ಮಕ್ಕಳನ್ನು ಕೊಂದು ಹೂತುಹಾಕಲಾಗಿದೆ ಎಂದು ಅವರ ಅಸ್ಥಿಗಳು ಇದಾಗಿದೆ ಎಂದು ಈತ ಪೊಲೀಸರಲ್ಲಿ ನುಡಿದಿದ್ದಾನೆ. ಬಳಿಕ ಗೆಳತಿಯಾದ ಅನೀಶ (22)ಳನ್ನು ಬಂಧಿಸಲಾಗಿದೆ. 2012ರಲ್ಲೂ, ೨೦೧೪ರಲ್ಲೂ ಜನಿಸಿದ ಮಕ್ಕಳನ್ನು ತಾನು ಕೊಂದಿರುವುದಾಗಿ ಅನೀಶ ಹೇಳಿಕೆ ನೀಡಿದ್ದಾಳೆ. 12 ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಈಕೆ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಈಕೆಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಅನೀಶ ಇನ್ನೋರ್ವರ ಜೊತೆ ವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದಾಳೆಂಬ ಸಂಶಯದ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಭವಿನ್ ಈಗ ಈ ವಿಷಯವನ್ನು ಬಹಿರಂಗ ಗೊಳಿಸಿರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.