ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ತೋಡಿನಲ್ಲಿ ಪತ್ತೆ
ಬದಿಯಡ್ಕ: ಕೆಲಸಕ್ಕೆ ತೆರಳಿ ಬಳಿಕ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ತೋಡಿನಲ್ಲಿ ಪತ್ತೆಯಾಗಿದೆ.
ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಬಾಳೆಗದ್ದೆ ನಿವಾಸಿ ನಾರಾಯಣ ಮಣಿಯಾಣಿ (48)ಯವರ ಮೃತದೇಹ ನಿನ್ನೆ ಮಧ್ಯಾಹ್ನ ವೇಳೆ ತೋಡಿನಲ್ಲಿ ಕಾಡು ಪೊದೆಗಳೆಡೆ ಸಿಲುಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಮೃತದೇಹದ ಮಹಜರು ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಕೂಲಿ ಕಾರ್ಮಿಕನಾಗಿದ್ದ ನಾರಾಯಣ ಕಳೆದ ಸೋಮವಾರ ಬೆಳಿಗ್ಗೆ ಮನೆಯಿಂದ ತೆರಳಿದ್ದು, ಅನಂತರ ಅವರು ಮನೆಗೆ ಮರಳಿ ಬಂದಿರಲಿಲ್ಲ. ವಿವಿಧೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಹೋದರ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ರಾತ್ರಿ ನಾರಾಯಣ ಕಾಯಿಮಲೆ ಯಲ್ಲಿದ್ದರೆನ್ನಲಾಗಿದೆ. ಅಲ್ಲಿಂದ ಅವರು ಮನೆಗೆ ತಲುಪಬೇಕಾದರೆ ತೋಡಿಗೆ ಕಂಗಿನಿಂದ ನಿರ್ಮಿಸಿದ ಸಂಕ ದಾಟಬೇಕಾಗಿದೆ. ಸಂಕ ದಾಟುತ್ತಿದ್ದ ವೇಳೆ ಆಯತಪ್ಪಿ ತೋಡಿಗೆ ಬಿದ್ದಿರಬಹುದೆಂದು ಅಂ ದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು, ಪೊಲೀಸ್ ಹಾಗೂ ಅಗ್ನಿಶಾಮಕದಳ ನಿನ್ನೆ ತೋಡಿನಲ್ಲಿ ಶೋಧ ನಡೆಸಿದ್ದು ಈ ವೇಳೆ ಮೃತದೇಹ ಪತ್ತೆಯಾಗಿದೆ.
ಕೊಗ್ಗು ಮಣಿಯಾಣಿ-ಚಂದ್ರಾವತಿ ದಂಪತಿಯ ಪುತ್ರನಾದ ಮೃತರು ಪತ್ನಿ ಸರಸ್ವತಿ, ಮಕ್ಕಳಾದ ವೈಶಾಖ್, ಆದಿರ, ಸಹೋದರರಾದ ಉದಯ, ಭಾಸ್ಕರ, ಉಮೇಶ, ಸಹೋದರಿ ಶಕುಂತಳ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.