ನಾಪತ್ತೆಯಾಗಿ ಮರಳಿಬಂದ ಯುವಕ-ಯುವತಿಯ ಮದುವೆಗೆ ಹಿಂಜರಿತ: ಜೋಡಿ ಮತ್ತೆ ನಾಪತ್ತೆ
ಕುಂಬಳೆ: ನಾಪತ್ತೆಯಾಗಿ ಬಳಿಕ ಮರಳಿ ಬಂದ ಯುವಕ ಹಾಗೂ ಯುವತಿಯ ಮದುವೆ ನಡೆಸಲು ಹಿಂಜರಿದ ಹಿನ್ನೆಲೆಯಲ್ಲಿ ಅವರಿಬ್ಬರು ಮತ್ತೆ ನಾಪತ್ತೆಯಾದ ಘಟನೆ ನಡೆದಿದೆ. ಇದರಂತೆ ಯುವಕನ ತಾಯಿಯ ಸಹೋದರ ನೀಡಿದ ದೂರಿನಂತೆ ಕುಂಬಳೆ ಪೊಲೀಸರುಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇಚ್ಲಂಪಾಡಿ ಕೊಡ್ಯಮ್ಮೆ ಉಜಾರು ಹೌಸ್‌ನ ಅಹಮ್ಮದ್ ನೌಫಲ್ (30) ನಾಪತ್ತೆಯಾಗಿದ್ದು, ಈ ಸಂಬಂಧ ಮಾವ ಅಬೂಬಕರ್ ಸಿದ್ದಿಖ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖ ಲಿಸಿಕೊಂಡಿದ್ದಾರೆ.
ಡಿಸೆಂಬರ್ 18ರಂದು ರಾತ್ರಿ 11.30ಕ್ಕೆ ಮನೆಯಿಂದ ಅಹಮ್ಮದ್ ನೌಫಲ್ ನಾಪತ್ತೆಯಾಗಿರುವು ದಾಗಿಯೂ ಆತನ ಜೊತೆಗೆ ಪ್ರಿಯತಮೆ ಇರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಅಹಮ್ಮದ್ ನೌಫಲ್ ಹಾಗೂ ಉಳುವಾರು ನಿವಾಸಿಯಾದ ನಸ್ರೀನ (19) ಎಂಬ ಯುವತಿ ಪ್ರೇಮದಲ್ಲಿದ್ದರು. ಈ ಯುವತಿ ಡಿಸೆಂಬರ್ 13ರಂದು ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ನಸ್ರೀನ ಹಾಗೂ ಅಹಮ್ಮದ್ ನೌಫಲ್ ಮರಳಿ ಬಂದಿದ್ದಾರೆ. ಅನಂತರ ಅವರು ತಮ್ಮ ಮದುವೆ ನಡೆಸಬೇಕೆಂದು ಆಗ್ರಹಪಟ್ಟು ಜಮಾಅತ್ತ್ ಕಮಿಟಿಯನ್ನು ಭೇಟಿಯಾಗಿದ್ದರೂ ಅನುಕೂಲ ನಿರ್ಧಾರ ಕೈಗೊಂಡಿಲ್ಲವೆನ್ನಲಾಗಿದೆ. ಈ ಮಧ್ಯೆ ಅವರಿಬ್ಬರು ಮತ್ತೆ ನಾಪತ್ತೆಯಾಗಿದ್ದಾರೆ. ಅವರಿಬ್ಬರನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.