ನಾಯಿ ಅಡ್ಡ ಓಡಿ ಸಂಭವಿಸಿದ ಅಪಘಾತ: ಆಟೋಚಾಲಕನ ನಿಧನದಿಂದ ನಾಡಿನಲ್ಲಿ ಶೋಕಸಾಗರ
ಪೆರ್ಲ: ರಸ್ತೆಗೆ ಅಡ್ಡವಾಗಿ ನಾಯಿ ಓಡಿದ ಪರಿಣಾಮ ಆಟೋರಿಕ್ಷಾ ಮಗುಚಿ ಚಾಲಕ ಮೃತಪಟ್ಟ ಘಟನೆ ಪೆರ್ಲ ಹಾಗೂ ಪರಿಸರ ಪ್ರದೇಶಗಳಲ್ಲಿ ಶೋಕಸಾಗರ ಸೃಷ್ಟಿಸಿದೆ. ಶನಿವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಪೆರ್ಲ ಬಳಿಯ ಪಡ್ರೆ ಬದಿಯಾರು ನಿವಾಸಿ ಬಿ. ಪ್ರವೀಣ (31) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಪ್ರವೀಣರ ಆಟೋರಿಕ್ಷಾ ಉಕ್ಕಿ ನಡ್ಕ ಮೆಡಿಕಲ್ ಕಾಲೇಜು ಮುಂಭಾಗಕ್ಕೆ ತಲುಪಿದಾಗ ನಾಯಿಯೊಂದು ದಿಢೀರ್ ಅಡ್ಡ ಬಂದಿತ್ತು. ಈ ವೇಳೆ ಆಟೋರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಪ್ರವೀಣ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ರಿಕ್ಷಾದಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ಬಳಿಕ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಬದಿಯಾರಿಗೆ ಕೊಂಡೊಯ್ದು ಮನೆ ಹಿತ್ತಿಲಿನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ದೇವಣ್ಣ ನಾಯ್ಕ್- ಶಾರದ ದಂಪತಿಯ ಪುತ್ರನಾದ ಮೃತರು ಸಹೋದರ- ಸಹೋದರಿಯರಾದ ಚಂದ್ರಶೇಖರ, ಪವಿತ್ರ, ವಿದ್ಯಾಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಾಡಿನಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದ ಪ್ರವೀಣರ ಅಕಾಲಿಕ ನಿಧನದಿಂದ ನಾಡು ಶೋಕಸಾಗರದಲ್ಲಿ ಮುಳುಗಿದೆ. ಅಗಲಿದ ಪ್ರವೀಣರಿಗೆ ಗೌರವ ಸೂಚಿಸುವ ಅಂಗವಾಗಿ ಆಟೋಚಾಲಕರು ಶನಿವಾರ ಹರತಾಳ ಆಚರಿಸಿದರು.