ನಾರಂಪಾಡಿ ನಿವಾಸಿ ಮಹಿಳೆ, ಪುತ್ರನ ದರೋಡೆ: ಆರು ಮಂದಿ ಆರೋಪಿಗಳ ಬಂಧನ
ಕಾಸರಗೋಡು: ಬದಿಯಡ್ಕ ಬಳಿಯ ನಾರಂಪಾಡಿ ನಿವಾಸಿಯಾದ ಕಸ್ತೂರಿ ರೈ, ಅವರ ಪುತ್ರ ಕರ್ನಾಟಕದ ಸುಳ್ಯಪದವು ಸಮೀಪ ಕುದ್ಕಾಡಿ ತೋಟದ ಮೂಲೆಯಲ್ಲಿ ವಾಸಿಸುವ ಗುರುಪ್ರಸಾದ್ ರೈ ಎಂಬಿವರಿಗೆ ಕೋವಿ ತೋರಿಸಿ ಬೆದರಿಕೆಯೊಡ್ಡಿ ಚಿನ್ನಾಭರಣ ಹಾಗೂ ಹಣ ದರೋಡೆ ನಡೆಸಿದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಬಳಿಯ ಮಂಜಲ್ತೋಡಿ ನಿವಾಸಿ ಕಿರಣ್ ಟಿ, ಶೇಣಿ ಗ್ರಾಮದ ಹೊಸಗದ್ದೆ ನಿವಾಸಿ ವಸಂತ್ ಎಂ, ಎಡನಾಡು ಗ್ರಾಮದ ಸೀತಾಂಗೋಳಿ ರಾಜೀವ ಗಾಂಧಿ ಕಾಲನಿ ನಿವಾಸಿಗಳಾದ ಮಹಮ್ಮದ್ ಫೈಝಲ್, ಅಬ್ದುಲ್ ನಿಸಾರ್, ಕಾಞಂಗಾಡ್ ಕಂಡತ್ತಿಲ್ ವೀಡು ನಿವಾಸಿ ಸನಾಲ್ ಕೆ.ವಿ, ವಿಟ್ಲ ಬಳಿಯ ಪೆರುವಾಯಿ ಕಣಿಯರ ಪಾಲುಮನೆಯ ಸುಧೀರ್ ಕುಮಾರ್ ಮಣಿಯಾಣಿ ಎಂಬಿವರು ಬಂಧಿತ ಆರೋಪಿಗಳಾ ಗಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಯೂ, ದರೋಡೆಯ ಸೂತ್ರಧಾರನೆನ್ನಲಾದ ಮಂಜೇಶ್ವರ ಬಳಿಯ ಪಚ್ಚಂಬಳದ ರವಿ ಎಂಬಾತ ಈಗಾಗಲೇ ಜೈಲಿನಲ್ಲಿದ್ದಾನೆ. ಈ ದರೋಡೆಗೆ ಸಂಚು ರೂಪಿಸಿದ್ದ ರವಿ ವರ್ಷಗಳ ಹಿಂದೆ ಭಾರೀ ಕೋಲಾ ಹಲಕ್ಕೆ ಕಾರಣವಾದ ಪೆರ್ಲದ ಜಬ್ಬಾರ್ ಕೊಲೆ ಪ್ರಕರಣದ ಪ್ರಮುಖ ಆರೋ ಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಈತ ಹಲವು ವರ್ಷಗಳಿಂದ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿದ್ದಾನೆ. ಈ ಸಂದರ್ಭದಲ್ಲಿ ಈತ ದರೋಡೆಗೆ ಸಂಚು ರೂಪಿಸಿದ್ದಾನೆ. ಅದರಂತೆ ಪರೋಲ್ ರಜೆಯಲ್ಲಿ ಬಿಡುಗಡೆಗೊಂಡ ಈತ ಕಸ್ತೂರಿ ರೈ ಹಾಗೂ ಅವರ ಪುತ್ರ ಗುರುಪ್ರಸಾದ್ ವಾಸಿಸುತ್ತಿದ್ದ ಮನೆಗೆ ನುಗ್ಗಿ ಇದೀಗ ಸೆರೆಗೀಡಾದ ಆರು ಮಂದಿ ಆರೋಪಿಗಳ ಸಹಾಯದಿಂದ ಹಣ ಹಾಗೂ ಚಿನ್ನಾಭರಣ ದರೋಡೆ ನಡೆಸಿದ್ದಾನೆ. ಅಲ್ಲದೆ ದರೋಡೆಯ ಮರುದಿನವೇ ಮರಳಿ ಜೈಲಿಗೆ ಮರಳಿದ್ದಾನೆ. ದರೋಡೆ ಪ್ರಕರಣದಲ್ಲಿ ಈತನ ಸುಳಿವು ಸಿಗದಂತಾಗಲು ಈತ ಈ ರೀತಿಯಲ್ಲಿ ಸಂಚು ಹೂಡಿದ್ದಾ ನೆಂದು ತಿಳಿಯಲಾಗಿದೆ. ದರೋಡೆ ಪ್ರಕ ರಣದಲ್ಲಿ ಇತರ ಆರು ಮಂದಿ ಆರೋ ಪಿಗಳನ್ನು ಸೆರೆ ಹಿಡಿದು ಪೊಲೀಸರು ತನಿಖೆಗೊಳಪ ಡಿಸಿದಾಗಲೇ ದರೋಡೆಗೆ ಸಂಚು ರೂಪಿಸಿರುವುದು ರವಿ ಎಂಬಾತನೆಂದು ತಿಳಿದು ಬಂದಿದೆ.
ಕೆಲವು ದಿನಗಳ ಹಿಂದೆ ರಾತ್ರಿ ಹೊತ್ತಿನಲ್ಲಿ ಗುರುಪ್ರಸಾದ್ ರೈಯ ಕುದ್ಕಾಡಿಯ ಮನೆಗೆ ನುಗ್ಗಿದ ಆರೋಪಿಗಳು ತಾಯಿ ಹಾಗೂ ಮಗನಿಗೆ ಬೆದರಿಕೆಯೊಡ್ಡಿ ಹಣ ಹಾಗೂ ಚಿನ್ನಾಭರಣ ದರೋಡೆ ನಡೆಸಿದ್ದರು.
ದರೋಡೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ನಾಲ್ಕು ವಿಶೇಷ ತಂಡ ರಚಿಸಿದ್ದರು. ಈ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಸೆ. ೨೮ರಂದು ಕಿರಣ್, ಸುಧೀರ್ ಕುಮಾರ್ ಮಣಿಯಾಣಿ, ಸನಾಲ್ ಕೆ.ವಿ. ಎಂಬಿವರನ್ನು ಬಂಧಿಸಲಾಗಿತ್ತು. ಅವರನ್ನು ತನಿಖೆಗೊಳಪಡಿಸಿದಾಗ ಇತರ ಆರೋಪಿಗಳ ಕುರಿತು ಮಾಹಿತಿ ಲಭಿಸಿತ್ತು. ಇದರಂತೆ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಾದ ಆರೋಪಿಗಳು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾದವರಾಗಿದ್ದಾರೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದು ಬಂದಿದೆ.ಬಂಧಿತ ವಸಂತನ ವಿರುದ್ಧ ಕುಂಬಳೆ ಠಾಣೆಯಲ್ಲಿ ನಾಲ್ಕು ಕೇಸುಗಳು, ಕಿರಣ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆ, ಮಂಜೇಶ್ವರ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಸನಾಲ್ ಕೆ.ವಿ. ವಿರುದ್ಧ ಕೇರಳದ ವಿವಿಧೆಡೆಗಳಲ್ಲಾಗಿ ೧೫ಪ್ರಕರಣಗಳು ದಾಖಲಾಗಿವೆ. ಮಹಮ್ಮದ್ ಫೈಝಲ್ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆ, ಮಂಜೇಶ್ವರ, ಕುಂಬಳೆ ಠಾಣೆಗಳಲ್ಲಿ ಈಗಾಗಲೇ ಕೇಸುಗಳಿವೆ. ಸುಧೀರ್ ಮಣಿಯಾಣಿ ವಿರುದ್ಧ ವಿಟ್ಲ, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ, ಅಬ್ದುಲ್ ನಿಸಾರ್ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.