ನಾರಂಪಾಡಿ ನಿವಾಸಿ ಹಾಗೂ ಪುತ್ರನನ್ನು ಕಟ್ಟಿಹಾಕಿ ದರೋಡೆ: ಬಾಡೂರಿನಲ್ಲಿ ಕರ್ನಾಟಕ ಪೊಲೀಸ್ ದಾಳಿ: ಓರ್ವ ವಶ
ಸೀತಾಂಗೋಳಿ: ನಾರಂಪಾಡಿ ನಿವಾಸಿ ಹಾಗೂ ಪುತ್ರನನ್ನು ಬೆದರಿಸಿ ಕಟ್ಟಿ ಹಾಕಿದ ಬಳಿಕ ಚಿನ್ನ ಮತ್ತು ಹಣ ದರೋಡೆಗೈದ ಪ್ರಕರಣದಲ್ಲಿ ಓರ್ವನನ್ನು ಕರ್ನಾಟಕದ ಪ್ರತ್ಯೇಕ ತನಿಖಾ ತಂಡ ವಶಕ್ಕೆ ತೆಗೆದಿದೆ. ಬಾಡೂರು ಸಮೀಪ ನಿವಾಸಿಯಾಗಿರುವ, ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆನ್ನಲಾಗಿದೆ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ತಲುಪಿದ ಪೊಲೀಸ್ ತಂಡ ಸಾರ್ವಜನಿಕ ಸಂಸ್ಥೆಯೊಂದರಲ್ಲಿ ಕುಳಿತುಕೊಂಡಿದ್ದ ವೇಳೆ ಈತನನ್ನು ವಶಕ್ಕೆ ತೆಗೆದಿದೆ. ಈತನನ್ನು ಸಮಗ್ರವಾಗಿ ವಿಚಾರಿಸಲಾಗುತ್ತಿದೆ.
ಈತಿಂಗಳ ಪ್ರಥಮ ವಾರದಲ್ಲಿ ನಾರಂಪಾಡಿಯ ಕಸ್ತೂರಿ ರೈ, ಕರ್ನಾಟಕ ಸುಳ್ಯಪದವು ಕುದ್ಕಾಡಿ ತೋಟಮೂಲೆ ನಿವಾಸಿ, ಪುತ್ರ ಗುರುಪ್ರಸಾದ್ ರೈ ಎಂಬವರನ್ನು ಆಕ್ರಮಿಸಿ ಹಣ, ಚಿನ್ನಾಭರಣ ದರೋಡೆಗೈಯ್ಯಲಾಗಿದೆ. ಮುಂಜಾನೆ ೨ ಗಂಟೆ ವೇಳೆ ಗುರುಪ್ರಸಾದ್ ರೈಯವರ ಮನೆಗೆ ಮುಖವಾಡ ಧರಿಸಿದ ತಂಡ ನುಗ್ಗಿದ್ದು ಬಳಿಕ ಆಯುಧಗಳನ್ನು ತೋರಿಸಿ ಬೆದರಿಸಿದೆ. ಬಳಿಕ ಚಿನ್ನಾಭರಣ, ನಗದು, ಬೈಕ್ನ ಕೀಲಿಕೈ, ಟಾರ್ಚ್ ಸಹಿತ ತಂಡ ಅಲ್ಲಿಂದ ಪರಾರಿಯಾಗಿದೆ. ಘಟನೆಯ ಬಳಿಕ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣದಲ್ಲಿ ಕಾಸರಗೋಡಿಗೂ ಸಂಬಂಧವಿದೆಯೆಂಬ ಶಂಕೆಯಲ್ಲಿ ಕಾಸರಗೋಡಿಗೂ ತನಿಖೆ ವಿಸ್ತರಿಸ ಲಾಗಿತ್ತು. ಇದರಂತೆ ತನಿಖೆ ನಡೆಸುತ್ತಿ ರುವ ಮಧ್ಯೆ ಬಾಡೂರಿಗೆ ಆರೋಪಿ ತಲುಪಿದ್ದಾನೆಂಬ ಮಾಹಿತಿಯಂತೆ ಪೊಲೀಸ್ ತಂಡ ಅಲ್ಲಿಗೆ ತಲುಪಿ ಆತನನ್ನು ವಶಕ್ಕೆ ತೆಗೆದಿದೆ.