ನಿದ್ರಿಸಿದ್ದ ಯುವಕನ ತಲೆಗೆ ಒನಕೆಯಿಂದ ಬಡಿದು ಕೊಲೆ: ತಂದೆ, ಪುತ್ರ ಸೆರೆ
ಕಣ್ಣೂರು: ನಿದ್ರಿಸುತ್ತಿದ್ದ ಯುವಕನ ತಲೆಗೆ ಒನಕೆಯಿಂದ ಹೊಡೆದು ಕೊಂದ ತಂದೆ ಹಾಗೂ ಪುತ್ರ ಸೆರೆಯಾಗಿದ್ದಾರೆ. ವಲಿಯ ಅರಿಕ್ಕಾಮಲ ಚಾಪಿಲಿ ವೀಟಿಲ್ ನಿವಾಸಿ ಸಿ.ಕೆ. ಅನೀಶ್ (42)ನನ್ನು ಕೊಲೆ ಗೈದ ಪ್ರಕರಣದಲ್ಲಿ ಸಂಬಂಧಿಕನಾದ ಪದ್ಮನಾಭನ್ (55), ಪುತ್ರ ಜಿನೀಪ್ (32) ಎಂಬಿವರನ್ನು ಕುಡಿಯಾನ್‌ಮಲ ಪೊಲೀಸರು ಬಂಧಿಸಿದ್ದಾರೆ. ಕೊಲೆಕೃತ್ಯದ ಬಗ್ಗೆ ಪೊಲೀಸರು ಈ ರೀತಿ ತಿಳಿಸುತ್ತಾರೆ. ಕೊಲೆಗೀಡಾದ ಅನೀಶ್ ಹಾಗೂ ಸೆರೆಯಾದ ಪದ್ಮನಾಭ, ಜಿನೀಪ್ ಅಬಕಾರಿ ಪ್ರಕರಣದ ಆರೋಪಿಗಳಾ ಗಿದ್ದಾರೆ. ಹತ್ತು ವರ್ಷದ ಹಿಂದೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಲು ತಲುಪಿದಾಗ ತಡೆದಿರುವುದಾಗಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ತಳಿಪರಂಬ್ ಫಸ್ಟ್‌ಕ್ಲಾಸ್ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೆ ಜಿನೀಪ್ ಸತತವಾಗಿ ಹಾಜರಾಗದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಪ್ರಗತಿ ಉಂಟಾಗಿರಲಿಲ್ಲ.
ಇತ್ತೀಚೆಗೆ ಪದ್ಮನಾಭರ ಮನೆಗೆ ತಲುಪಿದ ಅನೀಶ್ ಈ ಬಗ್ಗೆ ಪ್ರಶ್ನಿಸಿದ್ದನು. ಈ ಸಮಯದಲ್ಲಿ ಮದ್ಯದಮಲಿನಲ್ಲಿದ್ದ ಜಿನೀಪ್ ಹಾಗೂ ತಂದೆ ಪದ್ಮನಾಭ ಅನೀಶ್‌ನೊಂದಿಗೆ ವಾಗ್ವಾದಕ್ಕೆ ತೊಡಗಿದ್ದು, ಈ ಮಧ್ಯೆ ಜಿನೀಪ್ ಮನೆಯೊಳಗೆ ಹೋಗಿ ಒನಕೆಯನ್ನು ತಂದು ವರಾಂಡದಲ್ಲಿ ಮಲಗಿದ್ದ ಅನೀಶ್‌ನ ತಲೆಗೆ ಬಡಿದಿದ್ದಾನೆ. ತಲೆ ಸೀಳಿ ರಕ್ತ ಹರಿದ ಸ್ಥಿತಿಯಲ್ಲಿದ್ದ ಅನೀಶ್‌ನಿಗೆ ಪದ್ಮನಾಭನ್ ಬಟ್ಟೆಯಿಂದ ತಲೆಗೆ ಕಟ್ಟಿದ್ದಾನೆ. ಅದರ ಬಳಿಕ ಅವರಿಬ್ಬರೂ ನಿದ್ದೆ ಮಾಡಿದ್ದಾರೆ. ಮರುದಿನ ಬೆಳಿಗ್ಗೆ ಎದ್ದು ನೋಡುವಾಗ ಅನೀಶ್ ಮೃತಪಟ್ಟಿದ್ದಾನೆ.
ಮಾಹಿತಿ ತಿಳಿದು ತಲುಪಿದ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ ಕೃತ್ಯವೆಂದು ಖಚಿತ ಪಡಿಸಿದ್ದು, ಪೋಸ್ಟ್‌ಮಾರ್ಟಂಗಾಗಿ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡು ಹೋಗಲಾಗಿತ್ತು. ಅಲ್ಲಿ ಕೊಲೆ ಎಂದು ಖಚಿತಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.