ನಿದ್ರಿಸುತ್ತಿದ್ದ ಯುವಕನನ್ನು ಕಾರಿನಲ್ಲಿ ಕರೆದೊಯ್ದು ಕೊಲೆಗೈಯ್ಯಲೆತ್ನ: 4 ಮಂದಿ ವಿರುದ್ಧ ನರಹತ್ಯಾ ಯತ್ನ ಕೇಸು ದಾಖಲು
ಕಾಸರಗೋಡು: ನಿದ್ರಿಸುತ್ತಿದ್ದ ಯುವಕನನ್ನು ಕಾರಿನಲ್ಲಿ ಹತ್ತಿಸಿಕೊಂಡು ಹೋಗಿ ಮಾರಕಾಯುಧಗಳಿಂದ ಆಕ್ರಮಣಗೈದ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಯುವಕನನ್ನು ಮನೆಗೆ ಹಿಂತಿರುಗಿಸಿ ತಂಡ ಪರಾರಿಯಾಗಿದೆ. ಗಂಟೆಗಳ ಕಾಲ ಪ್ರಾಣ ಒತ್ತೆಯಿಟ್ಟ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದ್ದಾರೆ. ಘಟನೆಯಲ್ಲಿ ಇತ್ತೀಚೆಗೆ ಗಾಂಜಾ ಪ್ರಕರಣದಲ್ಲಿ ಸೆರೆಯಾಗಿ ಜೈಲಿನಿಂದ ಬಿಡುಗಡೆಗೊಂಡ ಯುವಕ ಸಹಿತ ನಾಲ್ಕು ಮಂದಿಯ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾ ಯತ್ನದಂತೆ ಕೇಸು ದಾಖಲಿಸಿದ್ದಾರೆ.
ಉಪ್ಪಳ ಬಪ್ಪಾಯಿತೊಟ್ಟಿ ಹನಫಿ ಮಸ್ಜಿದ್ ಸಮೀಪದ ಅಮಾನ್ ಮಂಜಿಲ್‌ನ ಮುಹಮ್ಮದ್ ಫಾರೂಕ್ (೩೫)ರಿಗೆ ಆಕ್ರಮಣ ನಡೆಸಲಾಗಿದೆ. ಇವರು ಈಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಇವರು ನೀಡಿದ ಹೇಳಿಕೆಯಂತೆ ಕಡಂಬಾರಿನ ಇರ್ಷಾದ್, ಬಂಬ್ರಾಣದ ಕಿರಣ್‌ರಾಜ್ ಹಾಗೂ ಗುರುತು ಪತ್ತೆಹಚ್ಚಬಹುದಾದ ಇತರ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ನಿನ್ನೆ ಮುಂಜಾನೆ ನಡೆದ ಘಟನೆಯ ಬಗ್ಗೆ ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ:- ತಿರುವನಂತಪುರದಲ್ಲಿ ಹೋಟೆಲ್ ಕಾರ್ಮಿಕನಾಗಿರುವ ಮುಹಮ್ಮದ್ ಫಾರೂಕ್ ೧೦ ದಿನದ ಹಿಂದೆ ಊರಿಗೆ ಹಿಂತಿರುಗಿದ್ದರು. ಇವರ ತಂದೆ ಇತ್ತೀಚೆಗೆ ನಿಧನ ಹೊಂದಿದ್ದಾರೆ. ಅದರ ಬಳಿಕ ತಾಯಿ ಸಹೋದರಿಯ ಮನೆಯಲ್ಲಿ ವಾಸವಾಗಿದ್ದಾರೆ. ಆದುದರಿಂದ ಊರಿಗೆ ತಲುಪಿದ ಮುಹಮ್ಮದ್ ಫಾರೂಕ್ ಏಕಾಂಗಿಯಾಗಿ ಬಪ್ಪಾಯಿತೊಟ್ಟಿಯ ಮನೆಯಲ್ಲಿ ಉಳಿದಿದ್ದರು. ನಿನ್ನೆ ಮುಂಜಾನೆ ೨ ಗಂಟೆ ವೇಳೆ ಸಂಬಂಧಿಕನಾದ ಇರ್ಷಾದ್ ಕ್ರಸ್ಟ ಕಾರ್‌ನೊಂದಿಗೆ ತಲಪಿದ್ದು, ನಿದ್ದೆಯಲ್ಲಿದ್ದ ಮುಹಮ್ಮದ್ ಫಾರೂಕ್‌ನನ್ನು ಎಬ್ಬಿಸಿ ತುರ್ತಾಗಿ ಬಂಬ್ರಾಣಕ್ಕೆ ಹೋಗಬೇಕೆಂದು ತಿಳಿಸಿದ್ದನು. ಇದನ್ನು ನಂಬಿ ಮುಹಮ್ಮದ್ ಫಾರೂಕ್ ಕಾರಿಗೆ ಹತ್ತಿದ್ದಾರೆ. ಕಾರು ಬಂಬ್ರಾಣದಿಂದಲೂ ಮುಂದೆ ಸಾಗಿ ಬಯಲಿನ ಸಮೀಪದ ಮನೆಯೊಂದರ ಮುಂದುಗಡೆ ನಿಂತಿದೆ. ಮುಹಮ್ಮದ್ ಫಾರೂಕ್ ಅಲ್ಲಿ ಇಳಿದ ಕೂಡಲೇ ಇರ್ಷಾದ್ ಕಾರು ಸಹಿತ ಪರಾರಿಯಾಗಿದ್ದಾನೆ. ಈ ಮಧ್ಯೆ ಆ ಮನೆಯ ಒಳಗಿನಿಂದ ಹೊರಗೆ ಬಂದ ಕಿರಣ್‌ರಾಜ್ ಹಾಗೂ ಇಬ್ಬರು ಸೇರಿ ಹೊಡೆದು ಕತ್ತಿಯಿಂದ ಇರಿದು ಗಾಯಗೊಳಿಸಿದ್ದಾರೆ. ಮತ್ತೆ ಪುನಃ ಇರ್ಷಾದ್ ಕಾರು ಸಹಿತ ತಲುಪಿದ್ದು, ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದಿದ್ದಾನೆನ್ನಲಾಗಿದೆ. ಇದರಿಂದ ಪ್ರಜ್ಞಾಹೀನಗೊಂಡ ಮುಹಮ್ಮದ್ ಫಾರೂಕ್‌ನನ್ನು ಅದೇ ಕಾರಿನಲ್ಲಿ ಹತ್ತಿಸಿ ಬಪ್ಪಾಯಿತೊಟ್ಟಿಯ ಮನೆಗೆ ತಲುಪಿಸಿ ತಂಡ ಪರಾರಿಯಾಗಿದೆ. ಮಂಗಳವಾರ ಮಧ್ಯಾಹ್ನದ ವರೆಗೆ ಫಾರೂಕ್‌ನನ್ನು ಹೊರಗೆ ಕಾಣದ ಹಿನ್ನೆಲೆಯಲ್ಲಿ ಪರಿಸರ ನಿವಾಸಿಗಳು ಮನೆಗೆ ತಲುಪಿ ನೋಡಿದಾಗ ರಕ್ತದ ಮಡುವಿನಲ್ಲಿ ಮುಳುಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮುಹಮ್ಮದ್ ಫಾರೂಕ್‌ನನ್ನು ಪತ್ತೆಹಚ್ಚಿದ್ದಾರೆ. ಕೂಡಲೇ ಅವರು ಉಪ್ಪಳದ ಆಸ್ಪತ್ರೆಗೆ ತಲುಪಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಮಂಗಳೂರಿನ ಆಸ್ಪತ್ರೆಗೆ ಕೊಂಡುಹೋಗಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ.
ಘಟನೆಯಲ್ಲಿ ಕುಂಬಳೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇತ್ತೀಚೆಗೆ ೧೦೦ ಕಿಲೋ ಗಾಂಜಾ ವಶಪಡಿಸಿದ ಪ್ರಕರಣದಲ್ಲಿ ಮಂಗಳೂರಿನಲ್ಲಿ ಸೆರೆಯಾಗಿ ಜೈಲಿನಲ್ಲಿದ್ದ ಕಿರಣ್‌ರಾಜ್ ಕೆಲವು ದಿನಗಳ ಹಿಂದೆ ಬಿಡುಗಡೆಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.