ನಿರ್ಮಾಣ ಹಂತದಲ್ಲಿದ್ದ ವೇಳೆಯಲ್ಲೇ ಕುಸಿದ ರಾಷ್ಟ್ರೀಯ ಹೆದ್ದಾರಿ: ಕಟ್ಟುನಿಟ್ಟಿನ ಕ್ರಮ ಕೈಗೊಂಡ ಕೇಂದ್ರ ಸರಕಾರ: ಇಂಜಿನಿಯರ್ ಅಮಾನತು

ತಿರುವನಂತಪುರ: ಮಲಪ್ಪುರಂ ಕುರಿಯೋಟ್‌ನಲ್ಲಿ ಅಂತಿಮ ಹಂತದ ನಿರ್ಮಾಣ ಕೆಲಸ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಕುಸಿದು ಬಿದ್ದ ಘಟನೆಗೆ ಸಂಬಂಧಿಸಿ ಕೇಂದ್ರ ಭೂ ಸಾರಿಗೆ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಇದರಂತೆ ಪ್ರಸ್ತುತ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದ ಗುತ್ತಿಗೆ ವಹಿಸಿಕೊಂಡಿದ್ದ ಕೆ.ಎಸ್.ಆರ್ ಕನ್‌ಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್ ಹಾಗೂ ಕನ್ಸಲ್ಟೇನ್ಸಿ ಪಡೆದಿದ್ದ ಹೈವೇ ಇಂಜಿನಿಯರ್‌ಗೆ ಕನ್ಸಲ್ಟೆನ್ಸಿಯನ್ನು ಉಚ್ಛಾಟಿಸಲಾಗಿದೆ ಮಾತ್ರವಲ್ಲ ಇದರ ಗುತ್ತಿಗೆ ಸಂಸ್ಥೆಯ ಪ್ರೊಜೆಕ್ಟ್ ಮೆನೇಜರ್ ಎಂ. ಅಮರನಾಥ್ ರೆಡ್ಡಿ ಮತ್ತು ಕನ್ಸಲ್ಟೆಂಟ್ ಟೀಂ ಲೀಡರ್  ರಾಜ್‌ಕುಮಾರ್ ಇವರನ್ನು ನಿರ್ಮಾಣ ಕೆಲಸದ ಹೊಣೆಗಾರಿಕೆ ಯಿಂದ ಅಮಾನತುಗೊಳಿಸಲಾಗಿ ದೆಯೆಂದು  ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಕಚೇರಿ ತಿಳಿಸಿದೆ. ಮಾತ್ರವಲ್ಲ ಗುತ್ತಿಗೆ ಕಂಪೆನಿ ಹಾಗೂ ಕನ್ಸಲೆಂಟ್‌ಗೆ ನಿಷೇಧ ಹೇರಲಾಗಿದೆ.

ನಿರ್ಮಾಣ ಕೆಲಸ ಕೊನೆಯ ಹಂತದಲ್ಲ್ಲಿರುವ ವೇಳೆಯಲ್ಲೇ ಮೊನ್ನೆ ಸುರಿದ ಧಾರಾಕಾರ ಮಳೆಗೆ  ಕುರಿಯೋಟ್ ರಾಷ್ಟ್ರೀಯ ಹೆದ್ದಾರಿ ಕುಸಿದು ಬಿದ್ದಿತ್ತು. ಇದರ ಬೆನ್ನಲ್ಲೇ ದಿಲ್ಲಿಯ ಐಐಟಿ ವಿಭಾಗದ ನಿವೃತ್ತ ಪ್ರೊಫೆಸರ್ ಜಿ.ವಿ. ರಾವ್ ನೇತೃತ್ವದ ತಜ್ಞರ ಸಮಿತಿ ಸ್ಥಳ ಸಂದರ್ಶಿಸಿ ಪರಿಶೀಲನೆ ನಡೆಸಿ ಅದರ ವರದಿಯನ್ನು ಕೇಂದ್ರ ಭೂಸಾರಿಗೆ ಇಲಾಖೆಗೆ ಸಲ್ಲಿಸಿತ್ತು. ಅದರ ಆಧಾರದಲ್ಲಿ ಕೇಂದ್ರ ಸರಕಾರ ಇಂತಹ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಹೊಣೆಗಾರಿಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ-ಮುಖ್ಯಮಂತ್ರಿ

ತಿರುವನಂತಪುರ: ಮಲಪ್ಪುರಂ ನಲ್ಲಿ  ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕುಸಿದು  ಬಿದ್ದಿರುವುದರ ಪೂರ್ಣ ಹೊಣೆಗಾರಿಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ್ದಾಗಿದೆ. ಇದರಲ್ಲಿ ರಾಜ್ಯ ಸರಕಾರವಾಗಲೀ ರಾಜ್ಯ ಲೋಕೋಪಯೋಗಿ ಇಲಾಖೆಯಾಗಲೀ ಪಾತ್ರವಿಲ್ಲ ವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆದ್ದ ರಿಂದಲೇ ಈ ವಿಷಯದಲ್ಲಿ ಕೇಂದ್ರ ಸರಕಾರ ಅಗತ್ಯದ ಕ್ರಮ ಕೈಗೊಂಡಿ ದೆಯೆಂದು ಅವರು ಹೇಳಿದ್ದಾರೆ. ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಮೊಹಮ್ಮದ್ ರಿಯಾಸ್ ಕೂಡಾ ಈ ವಿಷಯದಲ್ಲಿ  ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

You cannot copy contents of this page