ನಿಲ್ಲಿಸಿದ್ದ ಕಾರಿನೊಳಗೆ ಯುವಕ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ನಿಲ್ಲಿಸಿದ್ದ ಕಾರಿನೊಳಗೆ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಚೊಯ್ಯಂಗೋಡು ಕರಿಂದಳ ರಸ್ತೆಯ ಕೆ. ಕೊಟ್ಟನ್‌ರ ಪುತ್ರ ಕೆ.ವಿ. ದಿನೇಶನ್ (52) ಮೃತಪಟ್ಟ ವ್ಯಕ್ತಿ.
ಇಂದು ಬೆಳಿಗ್ಗೆ ೬ ಗಂಟೆಗೆ ನೀಲೇಶ್ವರ ರೈಲ್ವೇ ಮುತ್ತಪ್ಪನ್ ಕ್ಷೇತ್ರ ಸಮೀಪ ನಿಲ್ಲಿಸಿದ್ದ ಸ್ವಂತ ಕಾರಿನೊಳಗೆ ದಿನೇಶನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ನಿನ್ನೆ ಸಂಜೆ ಕಾರು ಸಹಿತ ಮನೆಯಿಂದ ತೆರಳಿದ್ದರು. ರಾತ್ರಿಯಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಫೋನ್‌ನಲ್ಲಿ ಸಂಪರ್ಕಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮನೆಯವರು ಹಾಗೂ ನಾಗರಿಕರು ರಾತ್ರಿಯಿಡೀ ಹುಡುಕಾಡಿದರೂ ಪತ್ತೆಹಚ್ಚಲಾಗಲಿಲ್ಲ. ಇಂದು ಮುಂಜಾನೆ ದಿನೇಶನ್‌ರ ಫೋನ್‌ನ ಟವರ್ ಲೊಕೇಶನ್ ನೀಲೇಶ್ವರ ರೈಲ್ವೇ ನಿಲ್ದಾಣ ಸಮೀಪದಲ್ಲಿರುವುದು ತಿಳಿದು ಬಂದಿದೆ. ಇದರಂತೆ ಅಲ್ಲಿಗೆ ತೆರಳಿ ನೋಡಿದಾಗ ದಿನೇಶನ್‌ರ ಕಾರು ಅಲ್ಲಿ ನಿಲ್ಲಿಸಿರುವುದು ಕಂಡು ಬಂದಿದೆ. ಕಾರಿನ ಬಾಗಿಲು ಮುಚ್ಚಿ ಲಾಕ್ ಮಾಡಲಾಗಿತ್ತು. ಬಾಗಿಲು ತೆರೆದು ನೋಡಿದಾಗ ದಿನೇಶನ್ ಹಿಂಬದಿ ಸೀಟಿನಲ್ಲಿ ಮಲಗಿದ ಸ್ಥಿತಿಯಲ್ಲಿದ್ದರು. ಪರಿಶೀಲಿಸಿದಾಗ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಪೊಲೀಸರು ತಲುಪಿ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಕಾರಣ ತಿಳಿಯಬಹುದಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಮೃತರು ತಾಯಿ ಕುಂಞಪೆಣ್, ಪತ್ನಿ ಪ್ರಮೀಳ, ಮಕ್ಕಳಾದ ದೃಶ್ಯ, ವೈಷ್ಣವ್, ಸಹೋದರ- ಸಹೋದರಿಯರಾದ ರವಿ, ಕುಂಞಿಕಣ್ಣನ್, ಸುರೇಶ್, ಅಶೋಕನ್, ರಾಧಾಮಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.