ನಿಲ್ಲಿಸಿದ್ದ ಟಿಪ್ಪರ್ ಲಾರಿಯೊಳಗೆ ಯುವಕ ನಿಗೂಢವಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಲಾರಿಯಲ್ಲಿ ರಕ್ತದ ಕಲೆ, ಸಮೀಪದಲ್ಲಿ ಬೆತ್ತ, ಚಪ್ಪಲಿಗಳು ಉಪೇಕ್ಷಿತ ಸ್ಥಿತಿಯಲ್ಲಿ
ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಯರ್‌ಕಟ್ಟೆಯಲ್ಲಿ ನಿಲುಗಡೆಗೊಳಿಸಿದ್ದ ಟಿಪ್ಪರ್ ಲಾರಿಯೊಳಗೆ ಯುವಕನೋರ್ವ ನಿಗೂಢ ರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಪೈವಳಿಕೆ ಬಾಯಾರುಪದವು ಕ್ಯಾಂಪ್ಕೋ ಕಂಪೌಂಡ್ ಬಳಿಯ ಅಬ್ದುಲ್ಲ ಎಂಬವರ ಪುತ್ರ ಮುಹಮ್ಮದ್ ಅಶಿಫ್ (29) ಸಾವಿಗೀಡಾದ ವ್ಯಕ್ತಿ. ಇಂದು ಮುಂಜಾನೆ 3.20ಕ್ಕೆ ಕಾಯರ್‌ಕಟ್ಟೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯೊಳಗೆ ಮುಹಮ್ಮದ್ ಅಶಿಫ್ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಿಷಯ ತಿಳಿದು ತಲುಪಿದ ಹೈವೇ ಪಟ್ರೋಲಿಂಗ್ ಪೊಲೀಸ್ ಹಾಗೂ ನಾಗರಿಕರು ಮುಹಮ್ಮದ್ ಅಶಿಫ್‌ರನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಗೂ, ಬಳಿಕ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಫೋನ್ ಕರೆಯೊಂದು ಬಂದ ಹಿನ್ನೆಲೆಯಲ್ಲಿ ಇಂದು ಮುಂಜಾನೆ 2 ಗಂಟೆ ವೇಳೆ ಮುಹಮ್ಮದ್ ಅಶಿಫ್ ತನ್ನ ಟಿಪ್ಪರ್ ಲಾರಿ ಸಹಿತ ಮನೆಯಿಂದ ತೆರಳಿದ್ದರು. ಸಂಬಂಧಿಕನಾದ ಒಬ್ಬ ವ್ಯಕ್ತಿ ಫೋನ್ ಕರೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಉಪ್ಪಳಕ್ಕೆ ತಲುಪಬೇಕಾದ ಸಮಯವಾಗಿದ್ದರೂ ಅಲ್ಲಿಗೆ ತಲುಪದ ಹಿನ್ನೆಲೆಯಲ್ಲಿ ಹುಡುಕಿ ಹೋದಾಗ ಮನೆಯಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಕಾಯರ್‌ಕಟ್ಟೆಯ ರಸ್ತೆ ಬದಿ ಲಾರಿ ನಿಲ್ಲಿಸಿರುವುದು ಕಂಡು ಬಂದಿದೆ. ಬಳಿಕ ಪರಿಶೀಲಿಸಿದಾಗ ಲಾರಿಯೊಳಗೆ ಮುಹಮ್ಮದ್ ಅಶಿಫ್ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಸಾವು ಸಂಭವಿಸಿರಬಹುದೆಂದು ಸಂಶಯಿಸ ಲಾಗುತ್ತಿದೆಯಾದರೂ ಅಲ್ಲಿನ ಸ್ಥಿತಿಗತಿಗಳು ನಿಗೂಢತೆ ಸೃಷ್ಟಿಸಿವೆ.
ಚಾಲಕನ ಸೀಟಿನ ಬಳಿಯ ಬಾಗಿಲು ಹಾಗೂ ಲಾರಿಯೊಳಗೆ ರಕ್ತದ ಕಲೆಗಳು ಕಂಡು ಬಂದಿದೆ. ಬಿದಿರಿನ ಒಂದು ಬೆತ್ತ ಕೂಡಾ ಲಾರಿಯಲ್ಲಿ ಪತ್ತೆಯಾಗಿದೆ. ಮುಹಮ್ಮದ್ ಅಶಿಫ್‌ರ ಚಪ್ಪಲಿಗಳು ರಸ್ತೆ ಬದಿಯಲ್ಲಿದ್ದವು.
ಈ ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವೇ ಸಾವಿಗೆ ಕಾರಣವೇನೆಂದು ತಿಳಿದು ಬರಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತರು ತಾಯಿ ಸಕೀನ ಹಾಗೂ ನಾಲ್ವರು ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.