ನೀರನ್ನೇ ಇಂಧನವನ್ನಾಗಿಸಿ ಚಲಿಸುವ ಭಾರತದ ಮೊದಲ ಹೈಟ್ರೋಜನ್ ರೈಲು ಸಿದ್ಧ: ಮುಂದಿನ ತಿಂಗಳು ಪ್ರಾಯೋಗಿಕ ಸೇವೆ
ಕಾಸರಗೋಡು: ಭಾರತೀಯ ರೈಲ್ವೇಯನ್ನು ಅತ್ಯಾಧುನಿಕ ಹಾಗೂ ಮೇಲ್ದರ್ಜೆಗೇರಿಸುತ್ತಿರುವಲ್ಲಿ ಸದಾ ಸಫಲತೆಯ ಹಾದಿಯಲ್ಲಿ ಸಾಗುತ್ತಿರುವ ಭಾರತೀಯ ರೈಲ್ವೇ ಇದೀಗ ಮತ್ತೊಂದು ಮಹತ್ತರ ಹೆಜ್ಜೆ ಇರಿಸಿದೆ.
ವಿದ್ಯುತ್, ಡೀಸೆಲ್ ಬಳಸದೆ ನೀರನ್ನೇ ಇಂಧನವನ್ನಾಗಿಸಿ ಸಂಚರಿಸುವ ಹೊಸ ರೈಲು ಸೇವೆಗೆ ಇದೀಗ ರೈಲ್ವೇ ಮುಂದಾಗಿದೆ. ಇದು ಹೈಡ್ರೋಜನ್ ಟ್ರೈನ್ ಆಗಿದೆ. ಈ ಪರಿಸರಸ್ನೇಹಿ ಹೈಡ್ರೋಜನ್ ರೈಲು ಮುಂದಿನ ತಿಂಗಳು ಪರೀಕ್ಷಣಾರ್ಥ ಸೇವೆ (ಟ್ರಯಲ್ ರನ್) ನಡೆಸಲಿದೆ.
ಈ ರೈಲಿನ ಇಂಧನ ಕೇವಲ ನೀರು ಮಾತ್ರವೇ ಆಗಿದೆ. ಹೌದು ಇದು ಹೈಡ್ರೋಜನ್ ಪವರ್ ಇಂಜಿನ್ ರೈಲು. ನೀರು ಹಾಗೂ ಬಿಸಿ ಹವೆ ಮೂಲಕ ಈ ರೈಲು ಸಾಗಲಿದೆ. ವಿಶೇಷವೆಂದರೆ ಶೂನ್ಯ ಕಾರ್ಬನ್ ಅಂದರೆ ಸಂಪೂರ್ಣ ಪರಿಸರಸ್ನೇಹಿಯಾಗಿದೆ ಈ ರೈಲು. ಇಷ್ಟೇ ಅಲ್ಲ ಡೀಸೆಲ್ ಇಂಜಿನ್‌ಗೆ ಹೋಲಿಸಿದರೆ ಶೇ. 60ರಷ್ಟು ಶಬ್ದವೂ ಕಡಿಮೆ. ಹೀಗಾಗಿ ಶಬ್ದ ಮಾಲಿನ್ಯದ ಆತಂಕವೂಇಲ್ಲ. ಮೊದಲ ಹಂತದಲ್ಲಿ ದೇಶಾದ್ಯಂತ ೩೫ ಹೈಡ್ರೋಜನ್ ರೈಲು ಸೇವೆ ಆರಂಭಿಸಲು ರೈಲ್ವೇಸಚಿವಾಲಯ ನಿರ್ಧರಿಸಿದೆ. ಈ ರೈಲು ಗಂಟೆಗೆ 140 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಒಂದು ಬಾರಿ ನೀರು ತುಂಬಿಸಿ ಪ್ರಯಾಣ ಆರಂಭಿಸಿದರೆ 1000 ಕಿ.ಮೀ. ದೂರ ಕ್ರಮಿಸಲಿದೆ.
ಮೊದಲ ಹಂತದಲ್ಲಿ ಹೈಡ್ರೋಜನ್ ರೈಲು ಹರ್ಯಾಣದ ಜಿಂದ್-ಸೋಲುಪತ್ ಮಾರ್ಗದಲ್ಲಿ ಸಂಚರಿಸಲಿದೆ. ಬಳಿಕ ಇದರ ಸೇವೆಯನ್ನು ದೇಶಾದ್ಯಂತವಾಗಿ ಹಂತ ಹಂತವಾಗಿ ವಿಸ್ತರಿಸಲಾಗುವುದು. ಸುಂದರ ಪರಿಸರ, ಪ್ರವಾಸಿ ತಾಣಗಳ ಮೂಲಕವೂ ಈ ಹೈಡ್ರೋಜನ್ ರೈಲು ಸಂಚಾರ ನಡೆಸಲಿದೆ. ಆ ಮೂಲಕ ಪರಿಸರಕ್ಕೆ ಶೂನ್ಯ ಹಾನಿ ಮೂಲಕ ಭಾರತೀಯ ರೈಲ್ವೇ ಪರಿಸರ ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆ.
ಗ್ರೀನ್ ರೈಲ್ವೇಸ್ ಅಡಿಯಲ್ಲಿ ಹೈಡ್ರೋಜನ್ ರೈಲು ಕಾರ್ಯ ನಿರ್ವಹಿಸಲಿದೆ. ಹೈಡ್ರೋಜನ್ ರೈಲನ್ನು ಈಗಾಗಲೇ ಹಲವು ಪ್ರಾಯೋಗಿಕ ಪರೀಕ್ಷೆಗೂ ಒಳಪಡಿಸಲಾಗಿದೆ. ಮಳೆ, ಬಿಸಿಲು ಸೇರಿದಂತೆ ವಿವಿಧ ಹವಾಮಾನಗಳಲ್ಲಿ ಪ್ರಯೋಗ ನಡೆಸಲಾಗಿದೆ. ಆ ಮೂಲಕ ಮುಂದಿನ ತಿಂಗಳಿಗೆ ಈ ರೈಲು ಪ್ರಾಯೋಗಿಕ ಸೇವೆ ಆರಂಭಿಸಲಿದೆ ಎಂದು ಭಾರತೀಯ ರೈಲ್ವೇ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.