ನೀರ್ಚಾಲು, ಬಂದ್ಯೋಡಿನಲ್ಲಿ ಅಪಘಾತ: ರಸ್ತೆ ದಾಟುತ್ತಿದ್ದ ಇಬ್ಬರು ವ್ಯಕ್ತಿಗಳು ಕಾರು ಢಿಕ್ಕಿಹೊಡೆದು ದಾರುಣ ಮೃತ್ಯು: ಮೂರು ಕಾರುಗಳ ವಶ
ನೀರ್ಚಾಲು/ ಕುಂಬಳೆ: ರಸ್ತೆ ಅಡ್ಡ ದಾಟುತ್ತಿದ್ದ ವೇಳೆ ಕಾರುಗಳು ಢಿಕ್ಕಿ ಹೊಡೆದು ಇಬ್ಬರು ವ್ಯಕ್ತಿಗಳು ಮೃತ ಪಟ್ಟ ದಾರುಣ ಘಟನೆ ನೀರ್ಚಾಲು ಹಾಗೂ ಬಂದ್ಯೋಡು ಮುಟ್ಟಂನಲ್ಲಿ ಸಂಭವಿಸಿದೆ. ನೀರ್ಚಾಲ್‌ನಲ್ಲಿ ಮೊನ್ನೆ ರಾತ್ರಿ ಅಪಘಾತ ಸಂಭವಿಸಿದ್ದು, ಮಾನ್ಯ ಉಳ್ಳೋಡಿಯ ಗೋಪಾಲ (60) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮೊನ್ನೆ ರಾತ್ರಿ 8.30ರ ವೇಳೆ ಬದಿಯಡ್ಕ- ಕುಂಬಳೆ ಕೆಎಸ್‌ಟಿಪಿ ರಸ್ತೆಯಲ್ಲಿ ನೀರ್ಚಾಲು ವಿಷ್ಣುಮೂರ್ತಿ ನಗರದಲ್ಲಿ ಅಪಘಾತವುಂಟಾಗಿದೆ. ಗೋಪಾಲ ಅವರು ರಸ್ತೆ ದಾಟುತ್ತಿದ್ದ ವೇಳೆ ಬದಿಯಡ್ಕ ಭಾಗದಿಂದ ಕುಂಬಳೆಯತ್ತ ಸಂಚರಿಸುತ್ತಿದ್ದ ಎರಡು ಕಾರುಗಳ ಪೈಕಿ ಒಂದು ಅವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದ ಗೋಪಾಲರ ದೇಹದ ಮೇಲೆ ಮತ್ತೊಂದು ಕಾರು ಸಂಚರಿಸಿತ್ತು. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಬೇಬಿ, ಮಕ್ಕಳಾದ ಸಂಜನ್, ಸಹಾನ, ಸಹೋದರ- ಸಹೋದರಿಯರಾದ ಹೇಮಾನಂದ, ಉಷಾ ಕುಮಾರಿ, ಸರಸ್ವತಿ, ಕವಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಈ ಅಪಘಾತಕ್ಕೆ ಸಂಬಂಧಿಸಿ ದುಬೈ ರಿಜಿಸ್ಟ್ರೇಶನ್ ಹೊಂದಿರುವ ಕಾರು ಸಹಿತ ಎರಡು ಕಾರುಗಳನ್ನು ಬದಿಯಡ್ಕ ಪೊಲೀಸರು ಕಸ್ಟಡಿಗೆ ತೆಗೆದು ಕೇಸು ದಾಖಲಿಸಿಕೊಂಡಿದ್ದಾರೆ. ಮತ್ತೊಂದು ಅಪಘಾತ ನಿನ್ನೆ ಸಂಜೆ 4 ಗಂಟೆಗೆ ಬಂದ್ಯೋಡು ಮುಟ್ಟಂನಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಮುಟ್ಟಂ ನಿವಾಸಿ ಅಬೂಬಕ್ಕರ್ ಹಾಜಿ (70) ಎಂಬ ವರು ಮೃತಪಟ್ಟಿದ್ದಾರೆ. ನಿನ್ನೆ ನಡೆದ ಆರಿಕ್ಕಾಡಿ ಮಖಾಂ ಉರೂಸ್‌ನ ಸಮಾರೋಪ ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಹಾಜಿ ಭಾಗವಹಿಸಿ ದ್ದರು. ಅನಂತರ ಅಲ್ಲಿಂದ ಮರಳಿ ಹೋಗುತ್ತಿದ್ದ ಅವರು ರಸ್ತೆ ದಾಟುತ್ತಿ ದ್ದಂತೆ ತಲುಪಿದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದ ಅವರು ಘಟನೆ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಇದೇ ವೇಳೆ ಢಿಕ್ಕಿ ಹೊಡೆದ ಕಾರು ನಿಲ್ಲಿಸದೆ ಪರಾರಿಯಾಗಿ ಹೊಸಂಗಡಿಯಲ್ಲಿ ಹೈವೇ ಪೊಲೀಸರ ಮುಂದೆ ನಿಲ್ಲಿಸಲಾಗಿದೆ. ಈ ಅಪ ಘಾತಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಕೊಂ ಡು ಕಾರನ್ನು ಕಸ್ಟಡಿಗೆ ತೆಗೆದಿದ್ದಾರೆ.
ಮೃತರು ಮಕ್ಕಳಾದ ಖದೀಜ, ರಹ್ಮತ್, ಮರಿಯಮ್ಮ, ಅಬ್ದುಲ್ ಖಾದರ್, ಅಬ್ದುಲ್ ರಹ್ಮಾನ್, ಅಶ್ರಫ್, ಅಳಿಯ-ಸೊಸೆ ಯಂದಿರಾದ ಅಬ್ದುಲ್ ಶುಕೂರ್, ಅಬ್ದುಲ್ಲ, ಬದರುದ್ದೀನ್, ಫೌಸಿಯಾ, ಸಫ್ರೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಬೂಬಕರ್ ಹಾಜಿಯವರ ಪತ್ನಿ ಸೈನಬ ಈ ಹಿಂದೆ ನಿಧನರಾಗಿದ್ದಾರೆ.