ನೀಲೇಶ್ವರ ಸುಡುಮದ್ದು ದುರಂತ: ಆರೋಪಿಗಳಿಗೆ ನೀಡಿದ ಜಾಮೀನು ರದ್ದು: ಅರೆಸ್ಟ್ ವಾರೆಂಟ್ ಜ್ಯಾರಿ
ಕಾಸರಗೋಡು: ನೀಲೇಶ್ವರ ತೆರು ಅಂಞಾಟ್ಟಂಬಲ ವೀರರ್‌ಕಾವು ಕ್ಷೇತ್ರದಲ್ಲಿ ಸಿಡಿಮದ್ದು ಪ್ರದರ್ಶನದ ವೇಳೆ ಉಂಟಾದ ದುರಂತದಲ್ಲಿ ನಾಲ್ವರು ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ಆರೋಪಿಗಳಿಗೆ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ಪ್ರಥಮ) ಮಂಜೂರು ಮಾಡಿದ ಜಾಮೀನನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ರದ್ದುಪಡಿಸಿದೆ. ಮಾತ್ರವಲ್ಲ ಆರೋಪಿಗಳಿಗೆ ಅರೆಸ್ಟ್ ವಾರೆಂಟ್ ಜ್ಯಾರಿಗೊಳಿಸಿಸುವಂತೆಯೂ ನಿರ್ದೇಶ ನೀಡಿದೆ.
ಆರೋಪಿಗಳಿಗೆ ಹೊಸದುರ್ಗ ಮೆಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದಾಗಲೇ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿತ್ತಲ್ಲದೆ, ಆ ಬಂಧಿತ ಆರೋಪಿಗಳನ್ನು ಜೈಲಿನಿಂದ ಹೊರ ಬಿಡದಂತೆಯೂ ನಿರ್ದೇಶ ನೀಡಿತ್ತು. ಆದರೆ ಜಿಲ್ಲಾ ನ್ಯಾಯಾಲಯದ ಆದೇಶ ತಲುಪುವ ಮೊದಲು ಈ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಒಂದನೇ ಆರೋಪಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಪಿ.ಕೆ. ಚಂದ್ರಶೇಖರನ್ ಮತ್ತು ಎರಡನೇ ಆರೋಪಿ ಸಮಿತಿ ಕಾರ್ಯದರ್ಶಿ ಕೆ.ಟಿ. ಭರತನ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ನಾಲ್ಕನೇ ಆರೋಪಿ ಪಿ. ರಾಜೇಶ್ ಮಾತ್ರ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಹೊಸದುರ್ಗ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಪಡಿಸಬೇಕೆಂದು ತನಿಖಾ ತಂಡ ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅದರ ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಇಬ್ಬರು ಆರೋಪಿಗಳ ಜಾಮೀನು ರದ್ದುಪಡಿಸಿ ಕೊನೆಗೆ ತೀರ್ಪು ನೀಡಿದೆ.