ನೋಂದಾಯಿಸಲು ಸಮಸ್ಯೆಗಳೇ ಅಧಿಕ : ಬದಿಯಡ್ಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸೌಕರ್ಯ ಕೊರತೆ

ಬದಿಯಡ್ಕ: ಸ್ಮಾರ್ಟ್ ಆಗಲು ಸ್ಪರ್ಧಿಸುತ್ತಿರುವ ಮಧ್ಯೆ, ಕೆಲವು ಕಡೆಗಳಲ್ಲಿ ಹಣೆಬರಹ ನೆಟ್ಟಗಿರದ ಕಾರಣ ಯಾವುದೂ ಸರಿಯಾಗುತ್ತಿಲ್ಲ. ಹಣೆಬರಹವನ್ನು ನೆಟ್ಟ ಸಾಗಿಸಲು ಪ್ರಯತ್ನಿಸುತ್ತಿಲ್ಲ ಎಂದು ಹೇಳುವುದೇ ಸರಿಯಾಗಿ ಪ್ರಯೋಗವಾಗಬಹುದು. ಸರಕಾರ ರಾಜ್ಯದ ಎಲ್ಲಾ ಕಚೇರಿಗಳನ್ನು ಸ್ಮಾರ್ಟ್ ಮಾಡುವುದಕ್ಕಾಗಿ ಪ್ರಯತ್ನಿಸು ತ್ತಿದೆ.  ಇದರಿಂದ ಜನರಿಗೆ ಅನುಕೂಲ ಹೆಚ್ಚುವುದು ಎಂಬುದು ದೂರ ದೃಷ್ಟಿ. ಆದರೆ ಕೆಲವು ಕಚೇರಿಗಳಲ್ಲಿ ಸ್ಮಾರ್ಟ್ ಎಂಬ ಹೆಸರು ಬಿಟ್ಟರೆ ಓಬಿರಾಯನ ಕಾಲದ ಸ್ಥಿತಿ ಬದಲಾಗಿಲ್ಲ.

ಬದಿಯಡ್ಕ ಉಪ ನೋಂದಾವಣಾ ಕಚೇರಿಯ ಬಗ್ಗೆ ಹೇಳುವುದಾದರೆ ಇಲ್ಲಿ ಎಲ್ಲವೂ ನೆಟ್ಟಗಾಗಿಲ್ಲ. ಇದರಿಂದ ತೊಂದರೆಗೊಳಗಾಗುವುದು ಮಾತ್ರ ಜನಸಾಮಾನ್ಯರು. ಈಗ ಎಲ್ಲವೂ ಗಣಕೀಕೃತವಾಗಿ ಬದಲಾಗಿದೆ. ಇಂಟರ್‌ನೆಟ್ ಮೂಲಕ ರಿಜಿಸ್ಟ್ರೇಶನ್ ನಡೆಯುತ್ತಿದೆ. ವಿದ್ಯುತ್, ನೆಟ್, ಕಂಪ್ಯೂಟರ್ ಮೊದಲಾದವುಗಳು ಇದಕ್ಕೆ ಸರಿಯಾಗಿರಬೇಕಾಗುತ್ತದೆ. ಆದರೆ ಬದಿಯಡ್ಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿದ್ಯುತ್ ಕೈ ಕೊಟ್ಟರೆ ನೋಂದಾವಣೆ ಇಲ್ಲ. ವಿದ್ಯುತ್ ಇದ್ದರೂ ನೆಟ್ ಸರಿಯಿಲ್ಲದಿದ್ದರೆ ನೋಂದಾವಣೆ ಇಲ್ಲ. ಕಂಪ್ಯೂಟರ್ ಕೈಕೊಟ್ಟರೆ ನೋಂದಾವಣೆ ಇಲ್ಲ. ಇದು ಯಾವಾಗ ಹೇಗೆ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇದೆಲ್ಲ ತಾಂತ್ರಿಕ ಉಪಕರಣಗಳು. ಹೀಗಾದರೆ ಆಗೋದು ಮಾತ್ರ ಇಲ್ಲಿಗೆ ತಲುಪಿದವರಿಗೆ ತೊಂದರೆ. ಒಂದು ಆಸ್ತಿ ನೋಂದಾವಣೆ ಮಾಡಬೇಕಿದ್ದರೆ ಕನಿಷ್ಠವೆಂದರೆ ಹತ್ತು ಜನರಾದರೂ ಇಲ್ಲಿಗೆ ತಲುಪಬೇಕು. ಕುಟುಂಬ ಸೊತ್ತು ಮೊದಲಾದವುಗಳಾದರೆ ಅದಕ್ಕೂ ಹೆಚ್ಚು ಜನ ಒಂದೇ ದಿನ ಒಂದೇ ಸಮಯದಲ್ಲಿ ರಿಜಿಸ್ಟ್ರಾರ್ ಕಚೇರಿಗೆ ತಲುಪಬೇಕು. ಇವರೆಲ್ಲ ಎಲ್ಲೆಲ್ಲಿ ಹರಡಿಕೊಂಡಿರುವವರಾಗಿರುತ್ತಾರೆ. ಏನೆಲ್ಲ ಕೆಲಸಗಳಲ್ಲಿ ಮುಳುಗಿದವರಾಗಿ ರುತ್ತಾರೆ. ಅದಕ್ಕೆಲ್ಲ ಬಿಡುವು ಮಾಡಿ ಅನಿವಾರ್ಯವಾಗಿ ಬದಿಯಡ್ಕ ರಿಜಿಸ್ಟ್ರಾರ್ ಕಚೇರಿಗೆ ತಲುಪಿದರೆ ಅಲ್ಲಿ ವಿದ್ಯುತ್ ಇಲ್ಲ ಎಂಬ ಕಾರಣದಿಂದ ಅಂದು ನೋಂದಾವಣೆ ನಡೆಯುವುದಿಲ್ಲ. ಹೇಗಾಗಬಹುದು? ಕಷ್ಟಪಟ್ಟು ದೂರದೂರಿನಿಂದ ಬಂದ ಜನರು ಸಂಕಷ್ಟ ಪಡುವುದು ತಪ್ಪುವುದಿಲ್ಲ.

ಈ ನೋಂದಾವಣಾ ಕಚೇರಿ ಬಹಳ ಚಿಕ್ಕದಾಗಿದ್ದು, ಜನ ಸೇರಿದರೆ ಒಳಗೆ ನಿಲ್ಲಲು ಕೂಡಾ ಸ್ಥಳಾವಕಾಶದ ಕೊರತೆ ಉಂಟಾಗುತ್ತದೆ. ಕುಳಿತು ಕೊಳ್ಳಲು ಸೌಕರ್ಯವಂತು ಇಲ್ಲಿ ಇಲ್ಲ. ಗಂಟೆಗಳ ಕಾಲ ಕೆಲವೊಮ್ಮೆ ಕಾಯ ಬೇಕಾಗುತ್ತದೆ. ಈ ವೇಳೆ ನಿಂತುಕೊಂಡೆ ಸಮಯ ಕಳೆಯ ಬೇಕಾಗುತ್ತದೆ. ನೀರು ಕುಡಿಯಬೇ ಕೆಂದು ಅನಿಸಿದರೆ ಬ್ಯಾಗಲ್ಲಿ ತಂದಿದ್ದರೆ ಕುಡಿಯಬಹುದು ಇಲ್ಲದಿದ್ದರೆ ಇಲ್ಲ.ನೋಂದಾವಣಾ ಕಚೇರಿ ಭದ್ರವಾಗಿರಬೇಕು. ಆದರೆ ಈ ಕಚೇರಿಗೆ ಮಳೆಗಾಲದಲ್ಲಿ ನೀರು ಒಳಗೆ ಸೇರುತ್ತದೆ. ಅಗತ್ಯದ ಕಡತಗಳು ಹಾನಿಯಾಗಲು ಇದು ಕಾರಣವಾಗಬಹುದು. ಛಾಪಾ ಕಾಗದದ ಬದಲಾಗಿ ಈಗ ಇ-ಸ್ಟಾಂಪ್ ಬಳಸಲಾಗುತ್ತದೆ. ಆದರೆ ಅದಕ್ಕೆ ಇಲ್ಲಿ ನೆಟ್ ಸಮಸ್ಯೆ ತಲೆದೋರುತ್ತಿದೆ. ಯುಪಿಎಸ್, ಬ್ಯಾಟರಿ ಎಲ್ಲಾ ಇದ್ದರೂ ವಿದ್ಯುತ್ ಹೋದ ತಕ್ಷಣ ಕಂಪ್ಯೂಟರ್ ನಿದ್ದೆಗೆ ಜಾರುತ್ತದೆ. ಬಳಿಕ ವಿದ್ಯುತ್ ಬಂದ ಮೇಲೂ ಅದು ನಿದ್ದೆಯಿಂದ ಏಳಬೇಕಿದ್ದರೆ ೧೫ ನಿಮಿಷವಾದರೂ ಬೇಕಾಗುತ್ತದೆ. ಕೆಲವೊಮ್ಮೆ ಇಡೀ ದಿವಸ ವಿದ್ಯುತ್ ಇಲ್ಲದಿರುವುದು, ಕೆಲವೊಮ್ಮೆ ಆಗಾಗ ವಿದ್ಯುತ್ ಕಣ್ಣುಮುಚ್ಚಾಲೆ ಮೊದಲಾದವು ಈ ರಿಜಿಸ್ಟ್ರಾರ್ ಕಚೇರಿಯ ತಾಳ ತಪ್ಪಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಿ ನೋಂದಾವಣೆ ಕೆಲಸವನ್ನು ಸುಸೂತ್ರವಾಗಿಸಲು ಅಧಿಕಾರಿವರ್ಗ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

You cannot copy content of this page