ಪತಿಯನ್ನು ಕೊಲೆಗೈದು ಹೂತುಹಾಕಿದ ಯುವತಿ: ಆರೋಪಿಗಳಿಗಾಗಿ ಶೋಧ
ಮುಂಬೈ: ಪ್ರಿಯತಮನ ಸಹಾಯದಿಂದ ಪತಿಯನ್ನು ಕೊಲೆಗೈದು ಮನೆಯೊಳಗೆ ಹೂತುಹಾಕಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ವಿಜಯ್ ಚೌಹಾಣ್ ಎಂಬ ೩೫ರ ಹರೆಯದ ಪತಿಯನ್ನು 28ರ ಹರೆಯದ ಪತ್ನಿ ಕೋಮಲ್ ನೆರೆಮನೆಯ ನಿವಾಸಿ ಹಾಗೂ ಪ್ರಿಯತಮನಾದ ಮೋನು ಜೊತೆ ಸೇರಿ ಕೊಲೆಗೈದು ಮನೆಯೊಳಗೆ ದಫನ ನಡೆಸಿರುವುದು.
ಅದರ ಬಳಿಕ ಕೋಮಲ್ ಹಾಗೂ ಪ್ರಿಯತಮ ಪರಾರಿಯಾಗಿದ್ದಾರೆ. ಮುಂಬೈಯಿಂದ 70 ಕಿಲೋ ಮೀಟರ್ ದೂರದಲ್ಲಿರುವ ನಳಸೋಪಾರ ಈಸ್ಟ್ ಗಡ್ಗಪದದಲ್ಲಿ ವಿಜಯ್ ಹಾಗೂ ಕೋಮಲ್ ವಾಸಿಸುತ್ತಿದ್ದರು. ಎರಡು ವಾರಕ್ಕೂ ಹೆಚ್ಚಾಗಿ ವಿಜಯ್ ಚೌಹಾಣ್ ಕರೆ ಮಾಡದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಇತ್ತೀಚೆಗೆ ಅವರ ಮನೆಗೆ ತಲುಪಿ ಮನೆಯೊಳಗೆ ನಡೆಸಿದ ತಪಾಸಣೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಮನೆಯೊಳಗೆ ಹಾಸಿದ ಟೈಲ್ಸ್‌ನಲ್ಲಿ ವ್ಯತ್ಯಾಸ ಕಂಡು ಬಂದು ಶಂಕೆ ತೋರಿ ಅವುಗಳನ್ನು ತೆಗೆದು ನೋಡಿದಾಗ ಅದರೊಳಗೆ ಬಟ್ಟೆಬರೆಗಳು ಲಭಿಸಿದ್ದು, ಹೊಂಡದಿಂದ ದುರ್ವಾಸನೆ ಬರುತ್ತಿತ್ತು. ಸಂಬಂಧಿಕರು ನೀಡಿದ ಮಾಹಿತಿಯಂತೆ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಆ ಬಳಿಕ ನಡೆಸಿದ ತಪಾಸಣೆಯಲ್ಲಿ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಪತ್ನಿ ಹಾಗೂ ಪ್ರಿಯತಮನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.