ಪತಿಯೊಂದಿಗೆ ಸಿಟ್ಟುಗೊಂಡು ಮನೆ ಬಿಟ್ಟ ಯುವತಿ ರೈಲ್ವೇ ನಿಲ್ದಾಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ್ನ
ಕಾಸರಗೋಡು: ಪತಿಯೊಂದಿಗೆ ಸಿಟ್ಟುಗೊಂಡು ಮನೆಯಿಂದ ಹೊರಟು ಹೋದ ಯುವತಿ ರೈಲು ನಿಲ್ದಾಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ರೈಲ್ವೇ ಪೊಲೀಸ್‌ನ ಸಮಯೋಚಿತ ಕಾರ್ಯಾಚರಣೆ ಫಲವಾಗಿ ಯುವತಿಯನ್ನು ಜೀವಾಪಾಯದಿಂದ ರಕ್ಷಿಸಲಾಗಿದೆ. ಕಣ್ಣೂರು ರೈಲ್ವೇ ನಿಲ್ದಾಣದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಬೇಕಲ ಠಾಣೆ ವ್ಯಾಪ್ತಿಯ ಪ್ರದೇಶವೊಂದರ ನಿವಾಸಿಯಾದ ೩೦ರ ಹರೆಯದ ಯುವತಿ ನಿನ್ನೆ ಬೆಳಿಗ್ಗೆ ಪತಿಯೊಂದಿಗೆ ಸಿಟ್ಟುಗೊಂಡು ಮನೆಯಿಂದ ಹೊರ ಟಿದ್ದಾಳೆ. ಕಾಸರಗೋಡು ನಗರಕ್ಕೆ ಬಂದ ಯುವತಿ ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಣ್ಣೂರಿಗೆ ಪ್ರಯಾಣಿಸಿದ್ದಳು. ಅಲ್ಲಿನ ರೈಲ್ವೇ ನಿಲ್ದಾಣದ ಒಂದನೇ ನಂಬ್ರ ಫ್ಲಾಟ್‌ಫಾಂನಲ್ಲಿ ಸಂಜೆ ಅಸ್ವಸ್ಥ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾಳೆ. ಯುವತಿಯ ವರ್ತನೆಯಲ್ಲಿ ಸಂಶಯಗೊಂಡ ರೈಲ್ವೇ ನಿಲ್ದಾಣ ಸಿವಿಲ್ ಪೊಲೀಸ್ ಆಫೀಸರ್ ನಿಖಿಲ್ ಆಕೆಯನ್ನು ವಿಚಾರಿಸಿದಾಗ ವಿಷ ಸೇವಿಸಿದ ವಿಷಯ ತಿಳಿಸಿದ್ದಾಳೆ. ಕೂಡಲೇ ಕಣ್ಣೂರು ಜಿಲ್ಲಾಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿದುದರ ಫಲವಾಗಿ ಯುವತಿ ಅಪಾಯದಿಂದ ಪಾರಾಗಿದ್ದಾಳೆ. ಆಕೆ ನೀಡಿದ ಸಹೋದರನ ಮೊಬೈಲ್ ನಂಬ್ರದಲ್ಲಿ ಕರೆ ಮಾಡಿ ಪೊಲೀಸರು ವಿಷಯ ತಿಳಿಸಿದ್ದಾರೆ. ತಕ್ಷಣ ಸಹೋದರ ಹಾಗೂ ಪತಿ ಕಣ್ಣೂರಿನ ಆಸ್ಪತ್ರೆಗೆ ತಲುಪಿದ್ದಾರೆ.