ಪತಿ ಉದ್ಯೋಗ ಖಾತರಿ ಕೆಲಸ ಮಧ್ಯೆ ಕುಸಿದುಬಿದ್ದು ಮೃತ್ಯು: ಅಂತ್ಯಸಂಸ್ಕಾರದ ಬೆನ್ನಲ್ಲೇ ಪತ್ನಿಯೂ ನಿಧನ
ಕುಂಬಳೆ: ಉದ್ಯೋಗ ಖಾತರಿ ಕೆಲಸದ ಮಧ್ಯೆ ಕುಸಿದುಬಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪತಿ ಮೃತಪಟ್ಟು ಅವರ ಅಂತ್ಯಕ್ರಿಯೆಗಳು ಜರಗಿದ ಬೆನ್ನಲ್ಲೇ ಪತ್ನಿ ಹೃದಯಾಘಾತದಿಂದ ನಿಧನರಾದರು. ಪುತ್ತಿಗೆ ಪಂಚಾಯತ್‌ನ ಬಾಡೂರು ಎಸ್‌ಸಿ ಕಾಲನಿ ನಿವಾಸಿ ಸಂಜೀವ (55), ಪತ್ನಿ ಸುಂದರಿ (50) ಎಂಬಿವರು ಮೃತಪಟ್ಟವರು. ಚಾಕಟೆಚಾಲ್ ಎಂಬ ಸ್ಥಳದಲ್ಲಿ ಉದ್ಯೋಗ ಖಾತರಿ ಕೆಲಸದ ಮಧ್ಯೆ ನಿನ್ನೆ ಮಧ್ಯಾಹ್ನ ಸಂಜೀವ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಲಾಯಿತಾದರೂ ಸಂಜೆಯ ವೇಳೆಗೆ ಮೃತಪಟ್ಟರು. ಮೃತದೇಹವನ್ನು ಮನೆಗೆ ತಲುಪಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಪತಿಯ ಆಕಸ್ಮಿಕ ವಿಯೋಗ ಸುಂದರಿಯನ್ನು ದುಃಖದ ಕಡಲಲ್ಲಿ ಮುಳುಗಿಸಿತ್ತು. ಇಂದು ಮುಂಜಾನೆ 2 ಗಂಟೆ ವೇಳೆ ಸುಂದರಿಯೂ ಮನೆಯಲ್ಲಿ ಕುಸಿದುಬಿದ್ದರು. ಹೃದಯಾಘಾತವೆಂಬ ಸಂಶಯದಲ್ಲಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಸಂಜೀವ ಹಾಗೂ ಸುಂದರಿಯ ನಿಧನ ನಾಡು ಹಾಗೂ ಕುಟುಂಬವನ್ನು ಕಣ್ಣೀರ ಕೋಡಿಯಲ್ಲಿ ಮುಳುಗಿಸಿದೆ.
ಸುಂದರಿ ವಿವಿಧ ರಂಗಗಳಲ್ಲಿ ಸಕ್ರಿಯರಾಗಿದ್ದರು. ಕುಟುಂಬಶ್ರೀ ಸಿಡಿಎಸ್ ಚೆಯರ್ ಪರ್ಸನ್ ಆಗಿಯೂ ದುಡಿದ ಇವರು ಪ್ರಸ್ತುತ ಸಿಡಿಎಸ್ ಮೆಂಬರ್ ಆಗಿದ್ದರು. ಅಂಗ ವಾಡಿ ಹೆಲ್ಪರ್ ಆಗಿರುವ ಇವರು ಕುಂಬಳೆ ವನಿತಾ ಕೋ-ಆಪರೇಟಿವ್ ಡೈರೆಕ್ಟರ್ ಆಗಿದ್ದರು.
ಮೃತರಿಬ್ಬರು ಮಕ್ಕಳಾದ ಸುಭಾಶಿನಿ, ಸುಹಾಸಿನಿ,ಸುಗಂಧಿ, ದೀಕ್ಷಿತ್, ಸಂಜೀವರ ಸಹೋದರ ಗೋವಿಂದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮನೆಗೆ ಪುತ್ತಿಗೆ ಪಂಚಾ ಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ, ಪಂಚಾಯತ್ ಜೋಯಿಂಟ್ ಡೈರೆಕ್ಟರ್ ಸುಧಾಕರನ್, ಪ್ರೊಜೆಕ್ಟ್ ಆಫೀಸರ್ ಮುಕುಂದನ್, ಸದಸ್ಯರಾದ ಅನಿತಾ ಎಂ, ಪ್ರೇಮ ಎನ್, ಪಾಲಾಕ್ಷ ರೈ, ಇ.ಕೆ. ಮಹಮ್ಮದ್ ಕುಂಞಿ, ಸಿಪಿಎಂ ಮುಖಂಡರಾದ ಡಿ.ಎನ್. ರಾಧಾಕೃಷ್ಣ, ಶಿವಪ್ಪ ರೈ, ಚನಿಯ ಪಾಡಿ, ಕೆ. ನಾರಾಯಣ, ಪ್ರಭಾಕರ ಟಿ, ಪ್ರದೀಪ್, ಬಿನೀಶ್ ಪಿ, ಪಿ.ಬಿ. ಮುಹಮ್ಮದ್ ಬಾಡೂರು, ಕೃಪಾರಾಜ್ ಕೆ. ಭೇಟಿ ನೀಡಿದರು. ನಿಧನಕ್ಕೆ ಸಿಪಿಎಂ ಬಾಡೂರು ಬ್ರಾಂಚ್ ಸಮಿತಿ, ನವಚೇತನ ಯೂತ್ ಕ್ಲಬ್ ಸಂತಾಪ ಸೂಚಿಸಿದೆ.
ಅನಾಥ ಮಕ್ಕಳ ರಕ್ಷಣೆಗೆ ಸಹಾಯಧನ ನೀಡಲು ಸರಕಾರಕ್ಕೆ ಡಿ. ಸುಬ್ಬಣ್ಣ ಆಳ್ವ ಆಗ್ರಹ
ಪುತ್ತಿಗೆ: ಬಾಡೂರು ಎಸ್‌ಸಿ ಕಾಲನಿ ನಿವಾಸಿ ಸಂಜೀವ ಉದ್ಯೋಗ ಖಾತರಿ ಕೆಲಸದ ಮಧ್ಯೆ ಕುಸಿದುಬಿದ್ದು ಮೃತಪಟ್ಟ ಬೆನ್ನಲ್ಲೇ ಅವರ ಪತ್ನಿ ಸುಂದರಿಯೂ ನಿಧನಹೊಂದಿದ ಘಟನೆ ಕುಟುಂಬವನ್ನು ತಲ್ಲಣಗೊಳಿ ಸಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ಸಹಾಯಹಸ್ತ ನೀಡಬೇಕೆಂದು ಪುತ್ತಿಗೆ ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಆಗ್ರಹಿಸಿದ್ದಾರೆ. ಅನಾಥ ಮಕ್ಕಳನ್ನು ರಕ್ಷಿಸಲು ಸರಕಾರ ಕೂಡಲೇ 10 ಲಕ್ಷ ರೂ. ಸಹಾಯಧನ ಬಿಡುಗಡೆ ಗೊಳಿಸಬೇಕೆಂದು ಆಗ್ರಹಿಸಿದ ಅವರು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ರೊಂದಿಗೆ ಚರ್ಚಿಸಿದ್ದಾರೆ. ಬಳಿಕ ಸರಕಾರಕ್ಕೆ ಇ ಮೈಲ್ ಮನವಿ ಕಳುಹಿಸಿರುವುದಾಗಿಯೂ ಸುಬ್ಬಣ್ಣ ಆಳ್ವ ತಿಳಿಸಿದ್ದಾರೆ.