ಪತಿ ಸಹಿತ ಬಿಜೆಪಿ ಸೇರಿದ ನಿವೃತ್ತ ಡಿಜಿಪಿ ಆರ್. ಶ್ರೀಲೇಖಾ
ತಿರುವನಂತಪುರ: ಕೇರಳದ ಪ್ರಥಮ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ (ಡಿಜಿಪಿ)ಯಾಗಿದ್ದ ಆರ್. ಶ್ರೀಲೇಖಾ ಬಿಜೆಪಿ ಸೇರಿದ್ದಾರೆ.
ತಿರುವನಂತಪುರದ ಈಶ್ವರ ವಿಲಾಸಂ ರಸ್ತೆ ಬಳಿಯ ತಮ್ಮ ಸ್ವಂತ ವಸತಿಯಲ್ಲಿ ಅವರು ನಿನ್ನೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್‌ರಿಂದ ಶ್ರೀಲೇಖಾ ಅವರು ಸದಸ್ಯತನ ಪಡೆದು ಆ ಮೂಲಕ ವಿದ್ಯುಕ್ತವಾಗಿ ಬಿಜೆಪಿ ಸೇರಿದರು. ಮಾತ್ರವಲ್ಲ ಆರ್. ಶ್ರೀಲೇಖಾರ ಪತಿ ಟಿ.ಎಸ್. ಸೇತುನಾಥ್‌ರವರೂ ಇದೇ ಸಂದರ್ಭದಲ್ಲಿ ಬಿಜೆಪಿ ಸದಸ್ಯತನ ಪಡೆದುಕೊಂಡರು.ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಭಾವ ನನ್ನನ್ನು ಬಿಜೆಪಿ ಸೇರಲು ಪ್ರೇರಣೆ ನೀಡಿದೆ ಎಂದು ನಂತರ ಆರ್. ಶ್ರೀಲೇಖಾ ತಿಳಿಸಿದ್ದಾರೆ. ಆರ್. ಶ್ರೀಲೇಖಾ ಕೇರಳದ ಪ್ರಥಮ ಐಪಿಎಸ್ ಅಧಿಕಾರಿಯಾಗಿದ್ದರೆಂಬ ದಾಖಲೆಯೂ ಅವರ ಹೆಸರಲ್ಲಿದೆ. ಅವರು ರಾಜ್ಯ ಬಂಧೀಖಾನೆ ಇಲಾಖೆಯ ಡಿಜಿಪಿಯಾಗಿಯೂ ಸೇವೆ ಸಲ್ಲಿಸಿದ್ದರು. ಕೇರಳ ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಸೇನ್‌ಕುಮಾರ್ ಕೂಡಾ ಈ ಹಿಂದೆ ಬಿಜೆಪಿ ಸೇರಿದ್ದರು. ಶ್ರೀಲೇಖಾ ಕೂಡಾ ಈಗ ಬಿಜೆಪಿ ಸೇರಿದ್ದಾರೆ.