ಪತ್ನಿಯೊಂದಿಗೆ ಸಿಟ್ಟುಗೊಂಡು ಬಾಲಕಿಯೊಂದಿಗೆ ಸ್ನೇಹ; ಲೈಂಗಿಕ ಕಿರುಕುಳ; ವ್ಲೋಗರ್ ಸೆರೆ
ಕಾಸರಗೋಡು: ಮದುವೆ ಯಾಗುವುದಾಗಿ ಭರವಸೆಯೊಡ್ಡಿ ೧೫ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವ್ಲೋಗರ್‌ನ್ನು ಸೆರೆಹಿಡಿಯಲಾಗಿದೆ. ಕುಂಬಳೆ ಬಳಿಯ ಕೊಡ್ಯಮ್ಮೆ ಚೇಪಿನಡ್ಕ ನಿವಾಸಿ ಮುಹಮ್ಮದ್ ಸಾಲಿ (35) ಎಂಬಾತನನ್ನು ಬಂಧಿಸಲಾಗಿದೆ. ವಿದೇಶದಿಂದ ಊರಿಗೆ ಬರುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊಯಿಲಾಂಡಿ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ. ಶಾಲು ಕಿಂಗ್ ಮೀಡಿಯಾ, ಶಾಲು ಕಿಂಗ್ ವ್ಲೋಗ್ಸ್, ಶಾಲು ಕಿಂಗ್ ಫ್ಯಾಮಿಲಿ ಎಂಬೀ ಹೆಸರುಗಳಲ್ಲಿ ಕಳೆದ ಏಳು ವರ್ಷಗಳಿಂದ ಈತ ಸಾಮಾಜಿಕ ತಾಣಗಳಲ್ಲಿ ಸಕ್ರಿಯನಾಗಿದ್ದನು. ಪತ್ನಿಯೊಂದಿಗೆ ಸಿಟ್ಟುಗೊಂಡಿದ್ದ ಸಂದರ್ಭದಲ್ಲಿ ಹದಿನೈದರ ಹರೆಯದ ಬಾಲಕಿಯನ್ನು ಮುಹಮ್ಮದ್ ಸಾಲಿ ಪರಿಚಯಗೊಂಡಿದ್ದನು. ಅನಂತರ ಇನ್‌ಸ್ಟಾಗ್ರಾಂ, ಸ್ನಾಪ್ ಚಾಟ್ ಮೂಲಕ ಗೆಳೆತನ ಬೆಳೆಸಿಕೊಂಡಿದ್ದನು. ಬಳಿಕ ಮದುವೆಯಾಗುವುದಾಗಿ ಭರವಸೆಯೊಡ್ಡಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆನ್ನಲಾಗಿದೆ. ಬಾಲಕಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡ ಬೆನ್ನಲ್ಲೇ ಈತ ವಿದೇಶಕ್ಕೆ ತೆರಳಿದ್ದನು. ಈ ಹಿನ್ನೆಲೆಯಲ್ಲಿ ಕೊಯಿಲಾಂಡಿ ಪೊಲೀಸರು ಈತನ ಪತ್ತೆಗಾಗಿ ಲುಕೌಟ್ ನೋಟೀಸು ಹೊರಡಿಸಿದ್ದರ. ಈತನಿಗೆ ಮೂವರು ಮಕ್ಕಳಿದ್ದಾರೆನ್ನಲಾಗಿದೆ.