ಪರಾರಿ ವೇಳೆ ಅಪಘಾತಕ್ಕೀಡಾದ ಕಾರಿನಲ್ಲಿ ಪತ್ತೆಯಾದ ಚಿನ್ನ, ಬೆಳ್ಳಿ ಕಳವು ಮಾಲು : ತಂಡದಲ್ಲಿ ನಾಲ್ಕು ಮಂದಿ: ಸೂತ್ರಧಾರ  ಬೆಂಗಳೂರಿನ ಕುಖ್ಯಾತ ಆರೋಪಿ ಎಂಬ ಶಂಕೆ

ಮುಳ್ಳೇರಿಯ: ಅಬಕಾರಿ ತಪಾಸಣೆ ವೇಳೆ ನಿಲ್ಲಿಸದೆ ಪರಾರಿಯಾಗುತ್ತಿದ್ದಾಗ  ಅಪಘಾತಕ್ಕೀಡಾದ ಕಾರಿನಲ್ಲಿ ಪತ್ತೆಯಾದ ಚಿನ್ನ, ಬೆಳ್ಳಿ, ನಗದು ಇತ್ಯಾದಿಗಳು ಕಳವು ಮಾಲುಗಳಾಗಿವೆ ಎಂಬುವುದು ಆದೂರು ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಅಪಘಾತಕ್ಕೀಡಾದ ಆ ಕಾರಿನಲ್ಲಿ 140.6 ಗ್ರಾಂ ಚಿನ್ನ, 339.2 ಗ್ರಾಂ ಬೆಳ್ಳಿ, 1,01,700 ರೂ. ನಗದು, ನಾಲ್ಕು ಮೊಬೈಲ್ ಫೋನ್, ಎರಡು ಸುತ್ತಿಗೆಗಳು, ಒಡೆದ ಬೀಗಗಳು ಮಾತ್ರವಲ್ಲದೆ ನಾಲ್ಕು ಎಟಿಎಂ ಕಾರ್ಡ್‌ಗಳೂ ಪತ್ತೆಯಾಗಿದ್ದು ಆದ್ದರಿಂದ ಈ ಕಳ್ಳರ ತಂಡದಲ್ಲಿ ಒಟ್ಟು ನಾಲ್ಕು ಮಂದಿ ಶಾಮೀಲಾಗಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಹೀಗೆ ಕಾರಿನಲ್ಲಿ ಪತ್ತೆಯಾದ ಎಟಿಎಂ ಕಾರ್ಡ್‌ಗಳ ಪೈಕಿ ಒಂದು ಕಾರ್ಡ್  ಕುಖ್ಯಾತ ಕಳವು ಆರೋಪಿ ಬೆಂಗಳೂರಿನ ಯಾಸಿಮ್ ಖಾನ್ ಎಂಬಾತನದ್ದಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ಈ ತಂಡದ ಸೂತ್ರಧಾರ ಆತನೇ ಆಗಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಅಪಘಾತಕ್ಕೀಡಾದ ಕಾರಿನಲ್ಲಿ ಪತ್ತೆಯಾದ ಚಿನ್ನ, ಬೆಳ್ಳಿ ಹಾಗೂ ನಗದು ಕರ್ನಾಟಕದ ಯಾವುದೋ ಪ್ರದೇಶ ದಿಂದ ಕದ್ದ ಮಾಲುಗಳಾಗಿವೆ ಯೆಂಬುವುದು ತನಿಖೆಯಲ್ಲಿ ಸ್ಪಷ್ಟಗೊಂ ಡಿರುವ ಹಿನ್ನೆಲೆಯಲ್ಲಿ ಆಬಗ್ಗೆ ಆದೂರು ಪೊಲೀಸರು ಕರ್ನಾಟಕ ಪೊಲೀಸ್ ವಿಭಾಗಕ್ಕೂ ಮಾಹಿತಿ ನೀಡಿದ್ದಾರೆ. ಇದು ಮಾತ್ರವಲ್ಲ ತನಿಖೆಯನ್ನು ಕರ್ನಾಟಕಕ್ಕೂ ವಿಸ್ತರಿಸಿದ್ದಾರೆ.

ಈ ಕಾರಿಗೆ ಕರ್ನಾಟಕ ರಾಜ್ಯ ನೋಂದಾವಣೆಯ ನಂಬ್ರಪ್ಲೇಟ್ ಅಳವಡಿಸಲಾಗಿತ್ತು.  ಅದು ನಕಲಿ ನಂಬ್ರಪ್ಲೇಟ್ ಆಗಿದೆ. ಇದು ನಿಜವಾಗಿ ಮಹಾರಾಷ್ಟ್ರ ನೋಂದಾಯಿತ ಕಾರು ಆಗಿರುವುದಾಗಿಯೂ ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆದ್ದರಿಂದ ಇದರ ತನಿಖೆಯನ್ನು ಪೊಲೀಸರು ಇನ್ನೊಂದೆಡೆ ಮಹಾರಾಷ್ಟ್ರಕ್ಕೂ ವಿಸ್ತರಿಸಿದ್ದಾರೆ.   ಕಾರು ಅಪಘಾತಕ್ಕೀಡಾದಾಗ ಅದರಲ್ಲಿದ್ದ ಇಬ್ಬರು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಆದ್ದರಿಂದ ಆ ಕಾರಿನಲ್ಲಿ ಪತ್ತೆಯಾದ ನಾಲ್ಕು ಎಟಿಎಂ ಕಾರ್ಡ್‌ನ ವಿಳಾಸದ ಜಾಡು ಹಿಡಿದು ಕಳ್ಳರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಇದಕ್ಕೆ ಕರ್ನಾಟಕ ಪೊಲೀಸರೂ  ಆದೂರು ಪೊಲೀಸರಿಗೆ ಸಾಥ್ ನೀಡುತ್ತಿದ್ದಾರೆ.

ಆದೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ  ಇಲಾಖೆಯ ಕೆಮು ಘಟಕ ನಿನ್ನೆ ಮುಂಜಾನೆ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಬಂದ ಕಾರನ್ನು ತಪಾಸಣೆಗಾಗಿ ತಡೆಯಲೆತ್ನಿಸಿದಾಗ ಕಾರು ನಿಲ್ಲದೆ ಪರಾರಿಯಾಗಿತ್ತು. ಅಬಕಾರಿ ತಂಡ ತಕ್ಷಣ ತಮ್ಮ ವಾಹನದಲ್ಲಿ ಆ ಕಾರನ್ನು ಬೆನ್ನಟ್ಟಿದಾಗ ಕಾರು ಮುಳ್ಳೇರಿಯ-ಬದಿಯಡ್ಕ ರಸ್ತೆಯಲ್ಲಿರುವ ಕಾಂಕ್ರೀಟ್ ಗೋಡೆಗೆ ಬಡಿದು ಅಪಘಾತಕ್ಕೀಡಾಗಿದ್ದರು. ಆಗ ಅದರಲ್ಲಿದ್ದ ಇಬ್ಬರು ತಕ್ಷಣ ಪರಾರಿಯಾಗಿದ್ದಾರೆ. ಆ ಕಾರನ್ನು ಅಬಕಾರಿ ತಂಡ ತಪಾಸಣೆಗೊಳ ಪಡಿಸಿದಾಗ ಅದರಲ್ಲಿ  ಚಿನ್ನ, ಬೆಳ್ಳಿ, ನಗದು ಹಾಗೂ ಆಯುಧಗಳು ಸೇರಿ ಇತರ ಸಾಮಗ್ರಿಗಳು ಪತ್ತೆಯಾಗಿತ್ತು. ಬಳಿಕ ಅಬಕಾರಿ ತಂಡ ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದರು.

You cannot copy contents of this page