ಪರೀಕ್ಷೆಗೆ ಹೆದರಿ ಬ್ಯಾಗ್ ಉಪೇಕ್ಷಿಸಿ ಅಡಗಿ ಕುಳಿತ ವಿದ್ಯಾರ್ಥಿಗಳು: ನಾಗರಿಕರಲ್ಲಿ ಆತಂಕ
ಉಪ್ಪಳ: ಶಾಲಾ ವಿದ್ಯಾರ್ಥಿಗಳ ಎರಡು ಬ್ಯಾಗ್‌ಗಳು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ನಿನ್ನೆ ಬೆಳಿಗ್ಗೆ ಉಪ್ಪಳದಲ್ಲಿ ಆತಂಕಕ್ಕೆ ಕಾರಣವಾಯಿತು. ಕೈಕಂಬ ಪೇಟೆ ಬಳಿಯ ಮಣ್ಣಿನ ರಾಶಿ ಮೇಲೆ ನಿನ್ನೆ ಬೆಳಿಗ್ಗೆ ಎರಡು ಶಾಲಾ ಬ್ಯಾಗ್‌ಗಳು ಪತ್ತೆಯಾಗಿತ್ತು. ಇದರಿಂದ ಆತಂಕಗೊಂಡ ನಾಗರಿಕರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಹಾಗೂ ನಾಗರಿಕರು ತೀವ್ರಶೋಧ ನಡೆಸಿದರೂ ಬ್ಯಾಗ್ ಯಾರದೆಂದು ತಿಳಿದುಬಂದಿಲ್ಲ. ಇದರಿಂದ ವ್ಯಾಪಕ ಆತಂಕ ಸೃಷ್ಟಿಯಾಯಿತು. ಬ್ಯಾಗ್ ಪತ್ತೆಯಾದ ಸ್ಥಳದಲ್ಲಿ ನಾಗರಿಕರು ಹಾಗೂ ಪೊಲೀಸರು ಕಾವಲು ನಿಂತಿದ್ದರು. ಈ ವೇಳೆ ಸಂಜೆ ೪ ಗಂಟೆಗೆ ಇಬ್ಬರು ವಿದ್ಯಾರ್ಥಿಗಳು ಅಲ್ಲಿಗೆ ತಲುಪಿದ್ದಾರೆ. ಅವರನ್ನು ವಿಚಾರಿಸಿದಾಗ ಶಾಲೆಯಲ್ಲಿ ಪರೀಕ್ಷೆಗೆ ಹೆದರಿ ಬ್ಯಾಗ್‌ಗಳನ್ನು ಇಲ್ಲಿ ಉಪೇಕ್ಷಿಸಿ ಮಣ್ಣಂಗುಳಿಯ ಮೈದಾನ ಸಮೀಪ ಅಡಗಿ ಕುಳಿತಿದ್ದುದಾಗಿ ತಿಳಿದುಬಂದಿದೆ. ಬಳಿಕ ಪೊಲೀಸರು ವಿದ್ಯಾರ್ಥಿಗಳ ಹೆತ್ತವರನ್ನು ಸ್ಥಳಕ್ಕೆ ಕರೆಸಿ ಮಕ್ಕಳನ್ನು ಅವರೊಂದಿಗೆ ಕಳುಹಿಸಿದ್ದಾರೆ.