ಪಹಲ್ಗಾಮ್ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಬ್ಬರು ಭಯೋತ್ಪಾದಕರ ಮನೆ ಧ್ವಂಸ

ಶ್ರೀನಗರ: ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪ್ರಕೃತಿ ರಮಣೀಯ ಪ್ರವಾಸಿ ಕೇಂದ್ರದಲ್ಲಿ ಎಪ್ರಿಲ್ 22ರಂದು ಅಮಾಯಕ ಪ್ರವಾಸಿಗರ ಮೇಲೆ ಏಕಾಏಕಿಯಾಗಿ ಗುಂಡಿನ ಸುರಿಮಳೆಗೈದು 26 ಮಂದಿಯನ್ನು ಕೊಲೆಗೈದು ಹಲವಾರು ಮಂದಿಯನ್ನು ಗಂಭೀರ ಗಾಯಗೊಳಿಸಿದ ಭಯೋತ್ಪಾದಕರ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ ಇಬ್ಬರು ಉಗ್ರರ ಮನೆಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳ ಸಹಾಯದಿಂದ ಭಾರತೀಯ ಸೇನೆ ಸ್ಫೋಟಿಸಿ ಧ್ವಂಸಗೊಳಿಸಿದೆ.

ಪಹಲ್ಗಾಮ್ ದಾಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ದಕ್ಷಿಣ ಕಾಶ್ಮೀರ ಬಿಜ್ ಬೆಹರಾ ನಿವಾಸಿ ಅದಿಲ್ ಮತ್ತು ದಕ್ಷಿಣ ಕಾಶ್ಮೀರದ ಇನ್ನೋರ್ವ ಉಗ್ರ ಅಸಿಫ್ ಶೇಖ್ ಎಂಬವರ ಐಷಾರಾಮಿ ಮನೆಗಳನ್ನು   ಧ್ವಂಸಗೊಳಿಸಲಾಗಿದೆ. ಈ ಇಬ್ಬರು ಉಗ್ರರ ಪೈಕಿ ಅದಿಲ್ ೨೦೧೮ರಲ್ಲಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ  ಉಗ್ರಗಾಮಿ ಸಂಘಟನೆಯಾದ ಜೈಶ್-ಎ ಮೊಹಮ್ಮದ್ (ಜೆಇಎಂ)ನಿಂದ ಭಯೋತ್ಪಾದಕ ತರಬೇತಿ ಪಡೆದಿದ್ದನು. ಇನ್ನೋರ್ವ ಉಗ್ರ ಅಸಿಫ್ ಜಾಗತಿಕ ಲಷ್ಕರ್ ಎ- ತೊಬಾ (ಎಲ್‌ಇಟಿ)ದ ಭಯೋತ್ಪಾದಕನಾಗಿದ್ದಾನೆ.

ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಎಲ್‌ಇಟಿಯ ಉಪ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಉಗ್ರರು ಪಹಲ್ಗಾಮ್‌ನಲ್ಲಿ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಈ ಇಬ್ಬರು ಉಗ್ರರು ಪ್ರಮುಖ ಪಾತ್ರ ವಹಿಸಿದ್ದರು. ಈ ಉಗ್ರಗಾಮಿ ದಾಳಿ ನಡೆಸಿದ ತಂಡದಲ್ಲಿದ್ದ ಇತರ ನಾಲ್ವರು ಭಯೋತ್ಪಾದಕರನ್ನು ಅಲಿ ಬಾಯಿ ಅಲಿಯಾಸ್ ತಲ್ಹಾ (ಪಾಕಿಸ್ತಾನಿ), ಅಸಿಫ್ ಫೌಜಿ (ಪಾಕಿಸ್ತಾನಿ), ಅಲಿದ್ ಹುಸೈನ್ ಥೋಕರ್ (ಅನಂತ್‌ನಾಗ್ ನಿವಾಸಿ) ಮತ್ತು ಅಹ್ಸಾನ್ (ಪಹಲ್ಗಾಮ್ ನಿವಾಸಿ)ಎಂದು ಜಮ್ಮು ಕಾಶ್ಮೀರ ಪೊಲೀಸರು ಗುರುತಿಸಿದ್ದು, ಇವರ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಭಯೋತ್ಪಾದಕರಿಗೆ ಸಹಾಯ ಮಾಡುವವರು ಕಠಿಣ ಶಿಕ್ಷೆ ಎದುರಿಸಬೇಕಾಗಿಬರಲಿದೆ ಎಂಬ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ.

ಪಹಲ್ಗಾಮ್ ದಾಳಿ ನಡೆಸುವ ಉದ್ದೇಶದಿಂದಲೇ ಉಗ್ರರು ಪಾಕಿಸ್ತಾನ ದಿಂದ ಕಾಶ್ಮೀರಕ್ಕೆ ಬಂದಿದ್ದರು. ದಾಳಿ ನಡೆಸಿದ ಬಳಿಕ ಅವರು ಗಡಿ ಮೂಲಕ ಮತ್ತೆ ಪಾಕಿಸ್ತಾನಕ್ಕೆ ಪಲಾಯನಗೈದಿದ್ದಾರೆ ಎಂಬ ಮಾಹಿತಿಯೂ ಭಾರತೀಯ ಸೇನೆಗೆ ಲಭಿಸಿದೆ. ಭಯೋತ್ಪಾದಕರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿರುವ ಸೇನೆ  ಮೂವರು ಲಷ್ಕರ್ ಉಗ್ರರನ್ನು ಬಂಧಿಸಿದೆ. ಮೊಹಮ್ಮದ್ ರಫೀಖ್ ಖಂಡೆ, ಮುಕ್ತಾರ್ ಅಹಮ್ಮದ್ ದಾರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ.

RELATED NEWS

You cannot copy contents of this page