ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿಯನ್ನು ಬಲಿತೆಗೆದುಕೊಂಡ ಬೆನ್ನಲ್ಲೇ ಅದಕ್ಕೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ವಿರುದ್ಧ ಕೈಗೊಂಡ ಹಲವು ಕ್ರಮಗಳು ಇಡೀ ಪಾಕಿಸ್ತಾನವನ್ನೇ ನಡುಗುವಂತೆ ಮಾಡಿದೆ. ಇದರಿಂದ ತತ್ತರಿಸಿದ ಪಾಕ್ ಪ್ರಧಾನಮಂತ್ರಿ ಶೆಹ್‌ಬಾಜ್ ಶೆರೀಫ್ ಇಂದು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಪಾಕಿಸ್ತಾನ ಮಾತ್ರವಲ್ಲ ಅಲ್ಲಿನ ಭಯೋತ್ಪಾದಕರ ನೆಲೆಗಳಿಗೆ ಭಾರತ ಅದ್ಯಾವುದೇ ಕ್ಷಣದಲ್ಲೂ ದಾಳಿ ನಡೆಸಬಹುದೆಂಬ ಭೀತಿ ಪಾಕಿಸ್ತಾನಕ್ಕೆ ಉಂಟಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಕೆಂಡಾಮಂಡಲವಾಗಿದೆ. ಪ್ರವಾಸಿಗರನ್ನು ಅದರಲ್ಲೂ ಹಿಂದೂಗಳನ್ನು ಮಾತ್ರವೇ ಗುರಿಯಾಗಿಸಿಕೊಂಡು ನಡೆದ ಈ ಉಗ್ರ ದಾಳಿಯಲ್ಲಿ ವಿದೇಶಿ ಪ್ರಜೆಗಳು ಸೇರಿ ಒಟ್ಟು 26 ಮಂದಿ ಬಲಿಯಾಗಿದ್ದಾಗರೆ. ಈ ದಾಳಿಗೆ ತಕ್ಷಣವೇ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಎಲ್ಲರೂ ಒಮ್ಮತದಿಂದ ಕೇಂದ್ರ ಸರಕಾರವನ್ನು ಒತ್ತಾಯಿಸತೊಡಗಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ದೆಹಲಿಯಲ್ಲಿ ಇಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ರಕ್ಷಣಾ ಖಾತೆ ಸಚಿವ ರಾಜ್‌ನಾಥ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ. ಭಯೋತ್ಪಾದನೆ ನಿರ್ಮೂಲನೆ ಮಾಡುವ ಬಗ್ಗೆ ಮಾತ್ರವಲ್ಲ ಅವರಿಗೆ ಆಶ್ರಯ ಹಾಗೂ ಆರ್ಥಿಕ ಇತ್ಯಾದಿ ನೆರವು ನೀಡುತ್ತಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಭಾರತ ಸರಕಾರ ಮುಂದಾಗಿದೆ. ಪಾಕಿಸ್ತಾನದ ವಿರುದ್ಧ ಪ್ರತೀಕಾರ ಕ್ರಮವೆಂಬಂತೆ ಆ ದೇಶದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಭಾರತ ತಕ್ಷಣದಿಂದ ರದ್ದುಪಡಿಸಿದೆ. ಆ ಮೂಲಕ ಪಾಕಿಸ್ತಾನ ಜಲಬಾಂಬ್ ಪ್ರಯೋಗ ನಡೆಸಿದೆ. ಇದರ ಹೊರತಾಗಿ ಭಾರತ ಮತ್ತು ಪಾಕಿಸ್ತಾನದ ಎಲ್ಲಾ ಗಡಿ (ಇಂಟಗ್ರೇಟೆಡ್ ಚೆಕ್ ಪೋಸ್ಟ್)ಗಳನ್ನು ತಕ್ಷಣದಿಂದ ಮುಚ್ಚಲಾಗಿದೆ. ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು 48 ತಾಸುಗಳೊಳಗಾಗಿ ಭಾರತ ತೊರೆಯುವಂತೆ ನಿರ್ದೇಶ ನೀಡಲಾಗಿದೆ. ಪಾಕ್ ಪ್ರಜೆಗಳಿಗೆ ಭಾರತ ಪ್ರವೇಶಿಸಲು ನಿರ್ಬಂಧ ಹೇರಲಾಗಿದೆ. ದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರಿ ಕೇಂದ್ರವನ್ನು ಮುಚ್ಚಲಾಗಿದೆ. ಅಲ್ಲಿನ ಪಾಕ್ ಹೈಕಮಿಶನರ್ ಸೇರಿದಂತೆ ಇತರ ಸಿಬ್ಬಂದಿಗಳು ಒಂದು ವಾರ ದೊಳಗಾಗಿ ಭಾರತ ತೊರೆಯುವಂ ತೆಯೂ ನಿರ್ದೇಶ ನೀಡಲಾಗಿದೆ. ಮಾತ್ರವಲ್ಲದೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಕೇಂದ್ರದ ಸಿಬ್ಬಂದಿಗಳನ್ನು ಭಾರತ ವಾಪಾಸು ಪಡೆಯುವ ತೀರ್ಮಾನವನ್ನು ಕೈಗೊಂಡಿದೆ. ಇಂತಹ ಕ್ರಮಗಳು ಪಾಕಿಸ್ತಾನದ ಬುಡ ಅಲುಗಾಡಿ ಸುವಂತೆ ಮಾಡಿದೆ.