ಪಾದಯಾತ್ರೆ ನಡೆಸಿದ್ದಕ್ಕೆ ನಟ ಸುರೇಶ್ ಗೋಪಿ ವಿರುದ್ಧ ಪ್ರಕರಣ ದಾಖಲು: ‘ಜೈಲಿಗೆ ಹೋಗಲೂ ಸಿದ್ಧ’
ತೃಶೂರು: ತೃಶೂರಿನ ಕರುವಣ್ಣೂರು ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ವಂಚನೆಯನ್ನು ಪ್ರತಿಭಟಿಸಿ ಪಾದಯಾತ್ರೆ ನಡೆಸಿದ ಸಿನೆಮಾ ನಟ ಸುರೇಶ್ ಗೋಪಿ ಸೇರಿದಂತೆ ೫೦೦ ಬಿಜೆಪಿ ಕಾರ್ಯಕರ್ತರ ವಿರುದ್ಧ ತೃಶೂರು ಈಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಾದಯಾತ್ರೆ ನಡೆಸುವ ಮೂಲಕ ಸಾರಿಗೆ ಅಡಚಣೆ ಉಂಟುಮಾಡಲಾಗಿದೆ ಇತ್ಯಾದಿ ಆರೋಪದಂತೆ ಈ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣ ದಾಖಲಿಸಿಕೊಂಡ ಮಾತ್ರಕ್ಕೆ ನಾನು ಹೆದರಲಾರೆ. ಬೇಕಾಗಿದ್ದಲ್ಲಿ ಜೈಲಿಗೂ ಹೋಗಲು ಸಿದ್ಧ ಎಂದು ಕೇಸಿನ ಬಗ್ಗೆ ಸುರೇಶ್ ಗೋಪಿ ಪ್ರತಿಕ್ರಿಯೆ ನೀಡಿದ್ದಾರೆ.
ಬ್ಯಾಂಕ್‌ನಿಂದ ವಂಚನೆಗೊಳಗಾದ ಜನರಿಗೆ ನ್ಯಾಯ ಒದಗಿಸಬೇಕೆಂಬ ಬೇಡಿಕೆ ಮುಂದಿರಿಸಿ ಸುರೇಶ್ ಗೋಪಿಯ ನೇತೃತ್ವದಲ್ಲಿ ತೃಶೂರಿನಲ್ಲಿ ಈ ಪಾದಯಾತ್ರೆ ನಡೆಸಲಾಗಿದೆ. ಅದರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿ ರುವುದು ರಾಜಕೀಯ ಹಗೆತನವಾಗಿದೆ ಎಂದು ಬಿಜೆಪಿಯ ತೃಶೂರು ಜಿಲ್ಲಾಧ್ಯಕ್ಷ ನ್ಯಾ. ಕೆ.ಕೆ. ಅನೀಶ್ ಕುಮಾರ್ ಆರೋಪಿಸಿದ್ದಾರೆ.