ಪಾಲಕ್ಕಾಡ್‌ನ ಯುವತಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಯೆಮನ್ ಸರಕಾರ: ನಿಮಿಷಪ್ರಿಯಳ ಬಿಡುಗಡೆಗಾಗಿ ಮುಂದುವರಿಯುತ್ತಿರುವ ಪ್ರಯತ್ನ; ಕುಟುಂಬ ಜೊತೆ ದೇಶವೂ ಪ್ರಾರ್ಥನೆಯಲ್ಲಿ
ಹೊಸದಿಲ್ಲಿ: ಯೆಮನ್ ದೇಶದ ಪ್ರಜೆಯೋರ್ವ ಸಾವಿಗೀಡಾದ ಪ್ರಕರ ಣಕ್ಕೆ ಸಂಬಂಧಿಸಿ ಕೇರಳದ ಪಾಲಕ್ಕಾಡ್ ಕೊಲ್ಲಂಕೋಡ್ ನಿವಾಸಿಯಾದ ನಿಮಿಷಪ್ರಿಯ ಎಂಬ ಯುವತಿ ಹಲವು ವರ್ಷಗಳಿಂದ ಯೆಮನ್‌ನ ಸನಾದಲ್ಲಿ ರುವ ಜೈಲಿನಲ್ಲಿದ್ದಾಳೆ. ನಿಮಿಷಪ್ರಿಯಳ ಬಿಡುಗಡೆಗಾಗಿ ಹಲವು ಕಾಲದಿಂದ ಪ್ರಯತ್ನಗಳು ನಡೆಯುತ್ತಿದ್ದರೂ ಅದೆಲ್ಲಾ ವಿಫಲಗೊಂಡಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ನಿಮಿಷಪ್ರಿಯಾಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಅಲ್ಲಿನ ನ್ಯಾಯಾಲಯ ತೀರ್ಪು ನೀಡಿದ್ದು, ಅದನ್ನು ಯೆಮನ್ ಅಧ್ಯಕ್ಷ ಅಂಗೀಕ ರಿಸಿರುವುದಾಗಿ ವರದಿಯಾಗಿದೆ. ಗಲ್ಲು ಶಿಕ್ಷೆ ಜ್ಯಾರಿಗೊಳಿಸಲಿರುವ ಅಧ್ಯಕ್ಷರ ಆದೇಶ ಪಬ್ಲಿಕ್ ಪ್ರೋಸಿಕ್ಯೂಟರ್‌ರ ಕಚೇರಿಗೆ ತಲುಪಿದೆ. ದಿನಾಂಕವನ್ನು ಪ್ರೋಸಿಕ್ಯೂಟರ್ ತೀರ್ಮಾನಿಸಲಿ ದ್ದಾರೆ. ಒಂದು ತಿಂಗಳೊಳಗೆ ಶಿಕ್ಷೆ ಜ್ಯಾರಿ ಯಾಗಲಿದೆಯೆಂದು ಹೇಳಲಾಗುತ್ತಿದೆ.
ಇದೇ ವೇಳ ನಿಮಿಷಪ್ರಿಯಳನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಆಕೆಯ ಕುಟುಂಬಕ್ಕೆ ಸಾಧ್ಯವಾದ ಎಲ್ಲಾ ಸಹಾಯವನ್ನು ಒದಗಿಸುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ನಿಮಿಷಪ್ರಿಯಳ ಬಿಡುಗಡೆಗಾಗಿ ಕುಟುಂಬ ನಡೆಸುವ ಪ್ರಯತ್ನಕ್ಕೆ ಸರಕಾರ ಸಹಕರಿಸುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ರಣ್‌ಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಆದರೆ ಯೆಮನ್‌ನೊಂದಿಗೆ ಭಾರತಕ್ಕೆ ರಾಜ ತಾಂತ್ರಿಕ ಸಂಬಂಧಗಳಿಲ್ಲದಿ ರುವುದು ಮುಂದಿನ ಪ್ರಯತ್ನಗಳಿಗೆ ತೊಡಕಾಗಿದೆ.
2017ರಲ್ಲಿ ಯೆಮನ್‌ನ ಪ್ರಜೆಯೋರ್ವನ ಸಾವು ನಿಮಿಷಪ್ರಿಯ ಜೈಲು ಶಿಕ್ಷೆ ಅನುಭವಿಸಲು ಕಾರಣ ವಾಗಿದೆ. ನಿಮಿಷಪ್ರಿಯ 2012ರಲ್ಲಿ ಯೆಮನ್ ದೇಶಕ್ಕೆ ತೆರಳಿ ನರ್ಸ್ ಕೆಲಸಕ್ಕೆ ಸೇರ್ಪಡೆಗೊಂಡಿದ್ದಳು. ಈಕೆಯ ಪತಿ ಟೋಮಿ ಥೋಮಸ್ ಕೂಡಾ ಜತೆಗಿದ್ದರು. ಈ ದಂಪತಿಗೆ ಮೊದಲ ಮಗು ಜನಿಸಿದ ಬಳಿಕ 2014ರಲ್ಲಿ ಊರಿಗೆ ಮರಳಿದ್ದರು. ಆದರೆ 2015 ಫೆಬ್ರವರಿಯಲ್ಲಿ ನಿಮಿಷಪ್ರಿಯ ಮತ್ತೆ ಯೆಮನ್‌ಗೆ ತೆರಳಿ ಮತ್ತೆ ನರ್ಸ್ ಕೆಲಸಕ್ಕೆ ಸೇರಿದ್ದರು. ಅಲ್ಪ ಕಾಲದ ಬಳಿಕ ಪತಿ ಹಾಗೂ ಮಗು ಯೆಮನ್‌ಗೆ ತೆರಳಲು ನಿರ್ಧರಿಸಿದ್ದರು. ಇದೇ ಹೊತ್ತಿನಲ್ಲಿ ಯೆಮನ್‌ನಲ್ಲಿ ಯುದ್ಧದ ಭೀತಿ ಹುಟ್ಟಿಕೊಂಡಿದ್ದರಿಂದ ಭಾರತದ ಪ್ರಜೆಗಳಿಗೆ ಅಲ್ಲಿಗೆ ತೆರಳುವುದಕ್ಕೆ ಭಾರತೀಯ ಹೈಕಮಿಶನ್ ನಿರ್ಬಂಧ ಹೇರಿತ್ತು. ಇದರಿಂದ ಟೋಮಿ ಥೋಮಸ್ ಹಾಗೂ ಮಗಳಿಗೆ ಅಲ್ಲಿಗೆ ತೆರಳಲು ಸಾಧ್ಯವಾಗಲಿಲ್ಲ.
ಈತನ್ಮಧ್ಯೆ ಆಸ್ಪತ್ರೆಗಳಲ್ಲಿ ದುಡಿದ ಅನುಭವವಿದ್ದ ನಿಮಿಷಪ್ರಿಯ ಯೆಮನ್‌ನ ರಾಜಧಾನಿಯಲ್ಲಿ ಸ್ವಂತ ಕ್ಲಿನಿಕ್ ತೆರೆಯಲು ನಿರ್ಧರಿಸಿದಳು. ಆದರೆ ಅಲ್ಲಿ ಕ್ಲಿನಿಕ್ ಆರಂಭಿಸಬೇಕಿದ್ದರೆ ಅಲ್ಲಿನ ಪ್ರಜೆಗಳ ಪಾಲುದಾರಿಕೆ ಅನಿವಾರ್ಯವಾಗಿತ್ತು. ಇದರಿಂದ ಅಲ್ಲಿ ಪರಿಚಯಸ್ಥನಾಗಿದ್ದ ಯೆಮನ್ ಪ್ರಜೆ ತಲಾಲ್ ಅಬ್ದುಮೆಹ್‌ದಿ ಎಂಬಾತನ ಪಾಲುದಾರಿಕೆಯಲ್ಲಿ ಕ್ಲಿನಿಕ್ ಆರಂಭಿಸಿದ್ದಳು. ಆದರೆ ಕೆಲವು ತಿಂಗಳು ಕಳೆದಾಗ ನಿಮಿಷಳಿಗೆ ಮೆಹ್‌ದಿ ಕಿರುಕುಳ ನೀಡಲಾರಂಭಿಸಿ ದ್ದಾನೆನ್ನಲಾಗಿದೆ. ಹಣಕ್ಕಾಗಿ ಹಿಂಸೆ ನೀಡುತ್ತಿದ್ದ ಆತ ಆಕೆಯ ಪಾಸ್‌ಪೋರ್ಟ್ ಹಿಡಿದಿಟ್ಟು ಆಕೆ ಕೇರಳಕ್ಕೆ ಮರಳದಂತೆ ತಡೆದಿದ್ದನು. ಆತನ ಹಿಂಸೆ, ಕಿರುಕುಳ ತೀವ್ರಗೊಂ ಡಾಗ ನಿಮಿಷಪ್ರಿಯ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದಳು.
೨೦೧೭ರಲ್ಲಿ ತನ್ನ ಪಾಸ್ ಪೋರ್ಟ್ ಮರಳಿ ಪಡೆದುಕೊಂಡ ನಿಮಿಷಪ್ರಿಯ ಗುಪ್ತವಾಗಿ ಅಲ್ಲಿಂದ ಕೇರಳಕ್ಕೆ ಹೊರಡಲು ಸಿದ್ಧಳಾದಳು. ಆದರೆ ಅದಕ್ಕೆ ತಡೆಯೊಡ್ಡಿದ ಮೆಹ್‌ದಿ ಆಕೆ ಮೇಲೆ ಮತ್ತೆ ಕಿರುಕುಳ ನೀಡಿದ್ದಾನೆನ್ನಲಾಗಿದೆ. ಈ ಮಧ್ಯೆ ಮೆಹ್‌ದಿ ನಿಗೂಢ ಸ್ಥಿತಿ ಯಲ್ಲಿ ಸಾವಿಗೀಡಾಗಿದ್ದಾನೆ. ಅಪರಿಮಿತ ವಾಗಿ ಡ್ರಗ್ ಇಂಜೆಕ್ಷನ್ ಮೂಲಕ ದೇಹಕ್ಕೆ ಚುಚ್ಚಿದ ಪರಿಣಾಮ ಆತ ಸಾವಿ ಗೀಡಾಗಿದ್ದಾನೆಂದೂ ಹೇಳಲಾಗುತ್ತಿದೆ.
ಘಟನೆ ಬಹಿರಂಗಗೊಳ್ಳುತ್ತಲೇ ಪೊಲೀಸರು ನಿಮಿಷಪ್ರಿಯಳನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ೨೦೧೮ರಲ್ಲಿ ಆರಂಭಗೊಂಡು ಸ್ಥಳೀಯ ನ್ಯಾಯಾಲಯ ನಿಮಿಷಪ್ರಿಯಾಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ೨೦೨೩ರಲ್ಲಿ ಯೆಮನ್‌ನ ಸುಪ್ರೀಂ ಜುಡೀಶಿಯಲ್ ಕೌನ್ಸಿಲ್ ಕೂಡಾ ಈ ತೀರ್ಪನ್ನು ಎತ್ತಿ ಹಿಡಿದಿತ್ತು. ಇದೇ ವೇಳ ಕೊಲೆಗೀಡಾದ ಮೆಹ್‌ದಿಯ ಕುಟುಂಬ ಕೇಳಿದಷ್ಟು ಹಣ ನೀಡಿದರೆ ಶಿಕ್ಷೆಯಿಂದ ಬಚಾವಾಗಬಹುದೆಂದೂ ನ್ಯಾಯಾ ಲಯ ತಿಳಿಸಿತ್ತು. ಇದನ್ನು ಯೆಮನ್‌ನಲ್ಲಿ ಬ್ಲಡ್ ಮನಿ ಎಂದು ಹೇಳಲಾಗುತ್ತಿದ್ದು, ಇದುವೇ ನಿಮಿಷಪ್ರಿಯಳಿಗೆ ಪಾರಾಗಲು ಇರುವ ಏಕೈಕ ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನಿಮಿಷಪ್ರಿಯಳ ಪರವಾಗಿ ಅನಿವಾಸಿ ಭಾರತೀಯರ ಸಂಘಟನೆಯೊಂದು ಹಣ ಸಂಗ್ರಹ ನಡೆಸುತ್ತಿದೆ.
ಇದೇ ವೇಳ ನಿಮಿಷಪ್ರಿಯಳನ್ನು ಭೇಟಿಯಾಗಲು ಆಕೆಯ ತಾಯಿ ಪ್ರೇಮ ಕುಮಾರಿ ಯೆiನ್‌ಗೆ ತೆರಳಿದ್ದು, ಅವರು ಅಲ್ಲಿನ ಸಾಮಾಜಿಕ ಕಾರ್ಯಕರ್ತ ಸಾಮುವಲ್ ಜೆರೋಂ ಎಂಬವರ ಆಸರೆಯಲ್ಲಿದ್ದಾರೆ.
ಮೆಹ್‌ದಿಯ ಕುಟುಂಬ ಕ್ಷಮಾಧಾನಕ್ಕಾಗಿ 40 ಸಾವಿರ ಡಾಲರ್ ಕೇಳಿತ್ತೆನ್ನಲಾಗಿದೆ. ಇದರಲ್ಲಿ 20 ಸಾವಿರ ಡಾಲರ್ ಮೊತ್ತವನ್ನು ಸಂಘಟನೆ ಸಂಗ್ರಹಿಸಿ ಹಸ್ತಾಂತರಿಸಿದೆ. ಬಾಕಿ ಮೊತ್ತವನ್ನು ಶೀಘ್ರ ನೀಡದಿದ್ದಲ್ಲಿ ಕ್ಷಮಾಧಾನ ನೀಡುವುದು ಅಸಾಧ್ಯವೆಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಅಷ್ಟೊಂದು ಮೊತ್ತ ಸಂಗ್ರಹಿಸುವುದ ಅಸಾಧ್ಯವೆಂದೂ ಹೇಳಲಾಗುತ್ತಿದೆ.
ಇದೇ ವೇಳೆ ನಿಮಿಷಪ್ರಿಯಳ 13ರ ಹರೆಯದ ಮಗಳು ಇದೀಗ ಊರಿನಲ್ಲಿದ್ದು, ತಾಯಿಗೆ ಯೆಮನ್ ಸರಕಾರ ಕ್ಷಮೆ ನೀಡುವುದೆಂದೂ, ತಾಯಿ ಶೀಘ್ರ ಜೈಲಿನಿಂದ ಬಿಡುಗಡೆ ಗೊಂಡು ಊರಿಗೆ ಮರಳುವಳೆಂಬ ನಿರೀಕ್ಷೆಯಲ್ಲಿದ್ದಾಳೆ.