ಪಾಲಿಟೀವ್ ಕೇರ್ ನರ್ಸ್ ನೇಮಕಾತಿ ವಿವಾದ: ಎಣ್ಮಕಜೆ ಪಂ. ಆಡಳಿತ ಸಮಿತಿಯ ನಿರ್ಧಾರಕ್ಕೆ ಹೈಕೋರ್ಟ್ ಅಸ್ತು

ಪೆರ್ಲ: ಪೆರ್ಲ  ಪಿಎಚ್‌ಸಿಯಲ್ಲಿ ಪಾಲಿಯೇಟಿವ್ ಕೇರ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಸವಿತಾ ಎಂಬವರಿಗೆ ಕರ್ತವ್ಯ ನಿರ್ವಹಣೆಗೆ ಅರ್ಹತೆಯಿಲ್ಲದ ಕಾರಣ ಅವರನ್ನು ಮರು ನೇಮಕ ಮಾಡದೆ  ಸಂದರ್ಶನದ ಮೂಲಕ ಹೊಸಬರನ್ನು ಆಯ್ಕೆ ಮಾಡಿದ ಎಣ್ಮಕಜೆ ಪಂಚಾಯತ್ ಆಡಳಿತ ಸಮಿತಿಯ ತೀರ್ಮಾನವನ್ನು  ಅಂಗೀಕರಿಸಿ ಹೈಕೋರ್ಟ್  ತೀರ್ಪು ನೀಡಿದೆ.

ಅಗತ್ಯದಷ್ಟು ಶಿಕ್ಷಣ ಅರ್ಹತೆ ಇಲ್ಲದಿದ್ದರೂ ಪಾಲಿಯೇಟಿವ್ ಕೇರ್ ನರ್ಸ್ ಆಗಿ ಸವಿತಾರನ್ನು  ನೌಕರಿಯಲ್ಲಿ ಮುಂದುವರಿಸಬೇಕೆಂದು ಒತ್ತಾಯಿಸಿ ಸಿಪಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೆ ಪಂಚಾಯತ್ ಆಡಳಿತ ಸಮಿತಿಯ ನಿರ್ಧಾರದ ವಿರುದ್ಧ ಒಂಬುಡ್ಸ್ ಮೆನ್‌ರನ್ನು ಸಂಪರ್ಕಿಸಿ ಸವಿತಾ ಅವರನ್ನು ಮರು ನೇಮಕ ಮಾಡುವಂತೆ ಆದೇಶವನ್ನು ಪಡೆಯಲಾಗಿತ್ತು. ಅದರ ವಿರುದ್ಧ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಹೈಕೋರ್ಟ್‌ನ್ನು ಸಮೀಪಿಸಿದ್ದರು.  ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿದ ಹೈಕೋರ್ಟ್, ಹಣಕಾಸಿನ ಅವ್ಯವಹಾರ ಕಂಡು ಬಂದರೆ ಮಾತ್ರವೇ ಒಂಬುಡ್ಸ್ ಮೆನ್ ಮಧ್ಯ ಪ್ರವೇಶಿಸಬಹುದಾಗಿದೆ. ನೇಮಕಾತಿ ಹಾಗೂ ಅರ್ಹತಾ ಮಾನದಂಡಗಳಲ್ಲಿ ಮಧ್ಯ ಪ್ರವೇಶಿಸಲು ಒಂಬುಡ್ಸ್ ಮೆನ್‌ಗೆ ಯಾವುದೇ  ಅಧಿಕಾರವಿಲ್ಲವೆಂದು ಹೈಕೋರ್ಟ್ ತಿಳಿಸಿದೆ. ಅಲ್ಲದೆ ಒಂಬುಡ್ಸ್ ಮೆನ್‌ನ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ ಪಂಚಾಯತ್ ಆಡಳಿತ ಸಮಿತಿಯ ನಿರ್ಧಾರ ಸರಿ ಎಂದು ಅಂಗೀಕರಿಸಿ ಆದೇಶ ಹೊರಡಿಸಿದೆ.

ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿದ್ದ  ಈ ಪ್ರಕರಣದಲ್ಲಿ ಯುಡಿಎಫ್ ಪಂಚಾಯತ್ ಆಡಳಿತ ಸಮಿತಿಯ ನಿರ್ದೇಶವನ್ನು ಹೈಕೋರ್ಟ್ ಅಂಗೀಕರಿಸಿ ಸಿಪಿಎಂಗೆ ಹಿನ್ನಡೆಯಾ ಗಿರುವುದು ಚರ್ಚೆಗೆ ಗ್ರಾಸವಾಗಿದೆ. ಹೈಕೋರ್ಟ್‌ನ ತೀರ್ಪು  ಸ್ವಾಗತಾರ್ಹವಾಗಿದೆ. ಒಂಬುಡ್ಸ್ ಮೆನ್‌ಗೆ ನೇಮಕಾತಿ  ಮತ್ತು ಆಡಳಿತ ನಿರ್ಣಯದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ ಎಂಬ  ಹೈಕೋರ್ಟ್‌ನ ಆದೇಶ ಮಹತ್ವದ್ದಾಗಿದೆಯೆಂದು ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page