ಪಿಣರಾಯಿ ವಿಜಯನ್ ಆಡಳಿತದಲ್ಲಿ ಅಧಿಕಾರಿಗಳ ದುರಾಡಳಿತ- ಎಂ.ಎಲ್. ಅಶ್ವಿನಿ
ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಆಡಳಿತದಲ್ಲಿ ರಾಜ್ಯದಲ್ಲಿ ಅಧಿಕಾರಿಗಳ ದುರಾಡಳಿತ ನಡೆಯುತ್ತಿದೆ ಎಂದು ಅಧಿಕಾರಿಗಳು ಜನದ್ರೋಹ ನೀತಿಯನ್ನು ಕೈಗೊಳ್ಳುತ್ತಿರುವುದಾಗಿಯೂ ಮಹಿಳಾ ಮೋರ್ಛ ರಾಷ್ಟ್ರೀಯ ಸಮಿತಿ ಸದಸ್ಯೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಲೈಫ್ ಮಿಷನ್ ಯೋಜನೆಗೆ ಸಂಬಂಧಿಸಿ ಆರೋಪ ಹೊರಿಸಿದ ಸಾವಿತ್ರಿ ಎಂಬ ಮಹಿಳೆಯನ್ನು ಮೊಗ್ರಾಲ್ ಪುತ್ತೂರು ಪಂಚಾಯತ್ ಕಚೇರಿಯಲ್ಲಿ ದಿಗ್ಬಂಧನಗೊಳಿಸಿದ ಘಟನೆಯನ್ನು ಪ್ರತಿಭಟಿಸಿ ಕಾಸರಗೋಡು ಮಂಡಲ ಮಹಿಳಾಮೋರ್ಛಾದ ನೇತೃತ್ವದಲ್ಲಿ ಆಯೋಜಿಸಿದ ನಗರ ಪೊಲೀಸ್ ಠಾಣೆ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಲೈಫ್ ಯೋಜನೆ ಪ್ರಕಾರ ಮನೆ ಮಂಜೂರಾಗಿದೆ ಎಂದು ತಿಳಿದು ವಾಸಿಸುತ್ತಿದ್ದ ಶೆಡ್ ಮುರಿದು ತೆಗೆದ ಸಾವಿತ್ರಿಗೆ ಮನೆ ನೀಡದೆ ಇನ್ನೋರ್ವೆಗೆ ಮನೆ ಮಂಜೂರುಗೊಳಿಸಿರುವುದಾಗಿ ಅಧಿಕೃತರು ತಿಳಿಸಿದ್ದು, ಸಾವಿತ್ರಿಯ ಬದುಕು ಬೀದಿಪಾಲಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ದಾಖಲೆಗಳನ್ನು ಹಿಂತಿರುಗಿಸಬೇಕು ಎಂದು ಆಗ್ರಹಿಸಿ ವಿಇಒ ಎಂ. ಅಬ್ದುಲ್ ನಾಸರ್‌ರಲ್ಲಿಗೆ ತೆರಳಿದಾಗ ಪಂಚಾಯತ್ ಕಚೇರಿಯಲ್ಲಿ ದಿಗ್ಬಂಧನಗೊಳಿಸಿರುವುದಾಗಿಯೂ ಅವರು ದೂರಿದರು. ಪೊಲೀಸ್ ಠಾಣೆ, ಪಂಚಾಯತ್ ಕಚೇರಿ ಸಹಿತದ ಸರಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ ಎಂದು ಅವರು ಆರೋಪಿಸಿದ್ದು, ಅಧಿಕಾರಿಯ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿದರು.
ಮಹಿಳಾಮೋರ್ಛಾ ಮಂಡಲ ಅಧ್ಯಕ್ಷೆ ಲಲಿತಪ್ರಿಯ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಅಧ್ಯಕ್ಷೆ ಪುಷ್ಪಾ ಗೋಪಾಲನ್, ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಕಾಸರಗೋಡು ಮಂಡಲ ಅಧ್ಯಕ್ಷ ಪ್ರಮೀಳಾ ಮಜಲ್, ಮಹಿಳಾ ಮೋರ್ಛಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಶ್ರೀಲತಾ ಟೀಚರ್ ಮಾತನಾಡಿದರು.