ಪಿಸ್ತೂಲು, ಮದ್ದುಗುಂಡುಗಳ ಸಹಿತ ಮಂಜೇಶ್ವರ ನಿವಾಸಿಗಳಾದ ಇಬ್ಬರ ಸೆರೆ: ಕಾರು ವಶ
ಕುಂಬಳೆ: ಅಕ್ರಮವಾಗಿ ಪಿಸ್ತೂಲು ಕೈವಶವಿರಿಸಿಕೊಂಡು ಕಾರಿನಲ್ಲಿ ಕುಳಿತು ಯಾವುದೋ ದುಷ್ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ಆರೋಪದಂತೆ ಮಂಜೇಶ್ವರ ನಿವಾಸಿಗಳಾದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಬಳಿಯ ಮೊರತ್ತಣೆ ನಿವಾಸಿ ಮೊಹಮ್ಮದ್ ಅಸ್ಕರ್ (26), ಮಂಜೇಶ್ವರ ಬೆಜ್ಜ ಮೂಡಂಬೈಲು ನಿವಾಸಿ ಅಬ್ದುಲ್ ನಿಸಾರ್ (29) ಎಂಬಿವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರ ಕೈಯಿಂದ ೧ ಪಿಸ್ತೂಲು, ಎರಡು ಮದ್ದುಗುಂಡುಗಳು, 2 ಮೊಬೈಲ್ ಫೋನ್ ಹಾಗೂ ಕಪ್ಪು ಬಣ್ಣದ ಹುಂಡೈವೆರ್ನಾ ಕಾರನ್ನು ವಶಪಡಿಸಲಾಗಿದೆ. ಈ ಇಬ್ಬರು ನಿನ್ನೆ ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರ್ ಎಂಬಲ್ಲಿ ಕಾರಿನಲ್ಲಿ ಕುಳಿತಿದ್ದಾಗ ಸಂಶಯಗೊಂಡ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಪಿಸ್ತೂಲು ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಪೈಕಿ ಮೊಹ ಮ್ಮದ್ ಅಸ್ಕರ್ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಅಪಹರಣ, ಹಲ್ಲೆ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಗಾಂಜಾ ಮಾರಾಟ, ಬೆಂಗ ಳೂರು ನಗರದ ಬೈಯಪ್ಪನಹಳ್ಳಿ ಪೊಲೀ ಸ್ ಠಾಣೆಯಲ್ಲಿ ಗಾಂಜಾ ಸಾಗಾಟ ಪ್ರಕ ರಣ ಸಹಿತ ೮ ಕೇಸುಗಳನ್ನು ದಾಖಲಿಸ ಲಾಗಿದೆಯೆಂದು ಪೊಲೀಸರು ತಿಳಿಸಿ ದ್ದಾರೆ. ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ರ ನಿರ್ದೇಶದಂತೆ ಸಿಸಿಬಿ ಘಟಕದ ಎಸಿಪಿ ಗೀತಾ ಕುಲಕರ್ಣಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಂ, ಪಿಎಸ್‌ಐಗಳಾಗ ಸುದೀಪ್ ಎಂ.ವಿ. ಮೊದಲಾದವರು ಕಾರ್ಯಾಚರಣೆ ನಡೆಸಿದ್ದಾರೆ.