ಪುಣೆಯಲ್ಲಿ ಹೆಲಿಕಾಪ್ಟರ್ ಪತನ, ಮೂವರು ಮೃತ್ಯು
ಪುಣೆ: ಪುಣೆಯ ಬಲ್ದಾನ್ ಪ್ರದೇ ಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಇದರಲ್ಲಿ ಮೂವರು ಪ್ರಯಾಣಿಸುತ್ತಿದ್ದು ಅವರು ಸಾವನ್ನಪ್ಪಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿ ತಿಳಿದ ತಕ್ಷಣ ಪೊಲೀ ಸರು ಮತ್ತು ಅಗ್ನಿಶಾಮಕದಳ ಹಾಗೂ ವಿಪತ್ತು ಪರಿಹಾರ ದಳ ಸ್ಥಳಕ್ಕೆ ಆಗಮಿಸಿ ಅಗತ್ಯದ ರಕ್ಷಾಕಾರ್ಯಾಚರಣೆಯಲ್ಲಿ ತೊಡಗಿದೆ. ಇಂದು ಬೆಳಿಗ್ಗೆ 6.45ಕ್ಕೆ ಈ ದುರ್ಘಟನೆ ನಡೆದಿದೆ. ಆಗಸದಲ್ಲಿ ಮಂಜು ಮುಸುಕಿಕೊಂಡಿದ್ದುದೇ ಈ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಹಾರಾಷ್ಟ್ರ ಸರಕಾರ ನಿರ್ದೇಶ ನೀಡಿದೆ. ತನಿಖೆ ಬಳಿಕವಷ್ಟೇ ಘಟನೆಗೆ ನಿಜವಾದ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೀಡಾಗಿ ಪತನಗೊಂಡ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಮೂವರು ವ್ಯಕ್ತಿಗಳ ದೇಹವೂ ಸುಟ್ಟು ಕರಕಲಾಗಿದೆ.
ದೆಹಲಿಯಿಂದ ಹೆರಿಟೇಜ್ ಏವಿಯೇಶಷನ್‌ಗೆ ಸೇರಿದ ಹೆಲಿಕಾಪ್ಟರ್ ಇದಾಗಿದ್ದು, ಇದು ಪುಣೆಯ ಆಕ್ಸ್‌ಫರ್ಡ್ ಗಲ್ಫ್ ಕೋರ್ಸ್ ಹೆಲಿಪ್ಯಾಡ್‌ನಿಂದ ಹೊರಟು ಎನ್ಸಿಪಿ ನಾಯಕ ಸುನಿಲ್ ತಕ್ಕರೆ ಅವರನ್ನು ಅಲ್ಲಿಂದ ಮುಂಬೈಗೆ ಕರೆದೊಯ್ಯಲು ಮಹಾರಾಷ್ಟ್ರದಿಂದ ಟೇಕ್ ಆಫ್ ನಡೆಸಿದ ಕೇವಲ ಐದು ನಿಮಿಷಗಳ ನಂತರ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ ೨೪ರಂದೂ ಪುಣೆಯ ಪೌಡಾ ಪ್ರದೇಶದಲ್ಲಿ ಇದೇ ರೀತಿ ಮುಂಬಯಿಯಿಂದ ಹೈದರಾಬಾದ್‌ಗೆ ಹೋಗುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು. ಅಂದು ಅದರ ಪೈಲೆಟ್ ಮತ್ತು ಇತರ ಮೂವರು ಸಹ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದರು.