ಪೆರಿಂಗಡಿಯಲ್ಲಿ ಮುಂದುವರಿಯುತ್ತಿರುವ ಕಡಲ್ಕೊರೆತ: ಹಲವು ವಿದ್ಯುತ್ ಕಂಬಗಳು ಸಮುದ್ರ ಪಾಲು; ಸಂಕಷ್ಟದಲ್ಲಿ ಸ್ಥಳೀಯರು
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪೆರಿಂಗಡಿಯಲ್ಲಿ ಕಡಲ್ಕೊರೆತ ತೀವ್ರ ರೀತಿಯಲ್ಲಿ ಮುಂದುವರಿಯುತ್ತಿದ್ದು, ನಿನ್ನೆ ಸುಮಾರು ೫ರಷ್ಟು ವಿದ್ಯುತ್ ಕಂಬಗಳು ಸಮುದ್ರ ಪಾಲಾಗಿವೆ. 20ರಷ್ಟು ಕಂಬಗಳು ಇನ್ನೂ ಅಪಾಯದಂಚಿನಲ್ಲಿದೆ. ಈ ಪರಿಸರದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಸುಮಾರು ೫೦ರಷ್ಟು ಮನೆಗಳು ಅಪಾಯದಂಚಿನಲ್ಲಿವೆ. ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ವಿಚ್ಛೇದಿಸಲಾಗಿದೆ. ರಸ್ತೆ ಸಂಪೂರ್ಣ ಸಮುದ್ರ ಪಾಲಾಗಿದ್ದು, ಪೆರಿಂಗಡಿ ಮುಟ್ಟಂ ಪ್ರದೇಶಕ್ಕೆ ಸಂಪರ್ಕ ಕಡಿತಗೊಂಡಿದೆ. ನಿನ್ನೆ ಸಂಜೆ ಸ್ಥಳಕ್ಕೆ ಮಂಜೇಶ್ವರ ತಹಶೀಲ್ದಾರ್, ಮಂಗಲ್ಪಾಡಿ ಪಂಚಾಯತ್ ಅಧಿಕಾರಿಗಳು, ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿದ್ಯುತ್ ಸಂಪರ್ಕ ಬದಲಿ ವ್ಯವಸ್ಥೆ ಹಾಗೂ ಕಡಲ್ಕೊರೆತವನ್ನು ತಡೆಯಲು ಸೂಕ್ತ ವ್ಯವಸ್ಥೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.