ಪೆರಿಯ ಅವಳಿ ಕೊಲೆ ಪ್ರಕರಣ: ಜಾಮೀನು ಲಭಿಸಿದ ನಾಲ್ವರು ಸಿಪಿಎಂ ನೇತಾರರು ಜೈಲಿನಿಂದ ಬಿಡುಗಡೆ
ಕಣ್ಣೂರು: ಪೆರಿಯ ಕಲ್ಯೋಟ್‌ನ ಯೂತ್ ಕಾಂಗ್ರೆಸ್ ಕಾರ್ಯಕರ್ತ ರಾದ ಕೃಪೇಶ್ ಮತ್ತು ಶರತ್‌ಲಾಲ್ ರನ್ನು ಕೊಲೆಗೈದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬಳಿಕ ನಿನ್ನೆ ಕೇರಳ ಹೈಕೋರ್ಟ್‌ನಿಂದ ಜಾಮೀನು ಲಭಿಸಿದ ಸಿಪಿಎಂ ನೇತಾರರಾದ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್, ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ರಾಘವನ್ ವೆಳುತ್ತೋಳಿ ಮತ್ತು ಕೆ.ವಿ. ಭಾಸ್ಕರ್ ಇಂದ ಬೆಳಿಗ್ಗೆ ಕಣ್ಣೂರು ಸೆಂಟ್ರಲ್ ಜೈಲಿನಿಂದ ಬಿಡುಗಡೆಗೊಂಡರು. ಇವರು ಜೈಲಿನಿಂದ ಬರುತ್ತಿರುವಂತೆಯೇ ಅವರನ್ನು ಸಿಪಿಎಂ ನೇತಾರರಾದ ಪಿ. ಜಯರಾಜನ್, ಎಂ.ವಿ. ಜಯರಾಜನ್, ಕಣ್ಣೂರು- ಕಾಸರಗೋಡು ಜಿಲ್ಲೆಯ ಸಿಪಿಎಂ ಜಿಲ್ಲಾ ಕಾರ್ಯದರ್ಶಿಗಳು, ಶಾಸಕ ಎಂ. ರಾಜಗೋಪಾಲನ್ ಸೇರಿದಂತೆ ಸಿಪಿಎಂನ ಹಲವು ನೇತಾರರು ಹಾಗೂ ಪಕ್ಷದ ಕಾರ್ಯಕರ್ತರ ತಂಡ ಇಂದು ಬೆಳಿಗ್ಗೆ ಕಣ್ಣೂರು ಸೆಂಟ್ರಲ್ ಜೈಲಿನ ಬಳಿ ಕೆಂಪು ಬಣ್ಣದ ಹಾರಗಳನ್ನು ತೊಡಿಸಿ ಭಾರೀ ಸ್ವಾಗತ ನೀಡಿದರು.
ಈ ಪ್ರಕರಣದಲ್ಲಿ ನಾವು ನಿರಪರಾಧಿಗಳಾಗಿದ್ದೇವೆ. ಅದು ನಮ್ಮ ಪಕ್ಷಕ್ಕೂ ತಿಳಿದಿದೆ. ಮಾತ್ರವಲ್ಲ ನ್ಯಾಯಾಲಯದ ಮೇಲೆ ನಮಗೆ ತುಂಬು ನಂಬುಗೆ ಇದೆ ಎಂದು ಹೊರ ಬಂದ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್ ಸುದ್ಧಿದಾರರಲ್ಲಿ ತಿಳಿಸಿದ್ದಾರೆ. ಈ ನಾಲ್ವರು ಸಿಪಿಎಂ ನೇತಾರರಿಗೆ ಸಿಬಿಐ ನ್ಯಾಯಾಲಯ ನೀಡಿದ ಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು, ಸಿಬಿಐ ನ್ಯಾಯಾಲಯಕ್ಕೆ ಲಭಿಸಿದ ತಿರುಗೇಟು ಆಗಿದೆ ಎಂದು ಇದೇ ಸಂದರ್ಭದಲ್ಲಿ ಪಿ. ಜಯರಾಜನ್ ಹೇಳಿದ್ದಾರೆ.
ಕಲ್ಯೋಟ್ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸ್ ಕಸ್ಟಡಿಯಿಂದ ಬಿಡಿಸಿ ಸಾಗಿಸಿದ ಆರೋಪದಂತೆ ಆ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದ್ದ ಕೆ.ವಿ. ಕುಂಞಿರಾಮನ್, ಕೆ. ಮಣಿಕಂಠನ್, ರಾಘವನ್ ವೆಳುತ್ತೋಳಿ ಮತ್ತು ಕೆ.ವಿ. ಭಾಸ್ಕರನ್‌ರಿಗೆ ಕೊಚ್ಚಿಯ ಸಿಬಿಐ ವಿಶೇಷ ನ್ಯಾಯಾಲಯ ತಲಾ ಐದು ವರ್ಷ ಸಜೆ ವಿಧಿಸಿತ್ತು. ಆ ತೀರ್ಪಿನ ವಿರುದ್ಧ ಈ ನಾಲ್ವರು ನೇತಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಮೂರ್ತಿ ಪಿ.ಬಿ. ಸುರೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜೋಬಿನ್ ಸೆಬಾಸ್ಟಿಯನ್‌ರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಶಿಕ್ಷೆಗೆ ತಡೆಯಾಜ್ಞೆ ಹೊರಡಿಸಿತ್ತು. ಮಾತ್ರವಲ್ಲದೆ ಆರೋಪಿಗಳಾದ ಈ ನಾಲ್ವರು ಸಿಪಿಎಂ ನೇತಾರರಿಗೆ ನಿನ್ನೆ ಜಾಮೀನು ಮಂಜೂರು ಮಾಡಿತ್ತು.