ಪೆರುವಾಡ್ ಕಡಪ್ಪುರದಲ್ಲಿ ಕಡಲ್ಕೊರೆತ ತಡೆಗೋಡೆ ಸಮುದ್ರ ಪಾಲು; ಆತಂಕದಲ್ಲಿ ನಿವಾಸಿಗಳು
ಮೊಗ್ರಾಲ್: ಮಳೆ ಆರಂಭಗೊಳ್ಳುವಾಗಲೇ ಪೆರುವಾಡ್ ಕಡಪ್ಪುರದ ಕರಾವಳಿ ನಿವಾಸಿಗಳಲ್ಲಿ ಭೀತಿ ಸೃಷ್ಟಿಯಾಗಿದೆ. ಪ್ರತೀ ವರ್ಷವೂ ಮಳೆಗಾಲದಲ್ಲಿ ಸಮುದ್ರಕ್ಕೆ ಹೆದರಿ ಇಲ್ಲಿನವರು ಬದುಕಬೇಕಾದ ಸ್ಥಿತಿ ಇದೆ. ಕಡಲ್ಕೊರೆತ ಈ ಪ್ರದೇಶದವರ ಭೀತಿಗೆ ಕಾರಣವಾಗಿದೆ. ಹಿಂದಿನ ವರ್ಷಗಳಲ್ಲಿ ತೀವ್ರ ರೀತಿಯ ಕಡಲ್ಕೊರೆತವನ್ನು ಎದುರಿಸಲು ಇಲ್ಲಿ ನಿರ್ಮಿಸಿದ ತಡೆಗೋಡೆ ಫಲಪ್ರದವಾಗಿರಲಿಲ್ಲ. ನಿರ್ಮಿಸಿದ ತಡೆಗೋಡೆಯನ್ನೆಲ್ಲಾ ಸಮುದ್ರ ತನ್ನೊಡಲಿಗೆ ಸೇರಿಸಿಕೊಂಡಿದೆ. ಕಳೆದ ವರ್ಷ ೨೦೦ ಮೀಟರ್‌ಗಳಷ್ಟು ದೂರದಲ್ಲಿ ಕಡಲ್ಕೊರೆತವುಂಟಾದಾಗ ಹಲವಾರು ಮನೆಗಳಿಗೆ ಹಾನಿ ಉಂಟಾಗಿತ್ತು. ಕೆಲವು ಕುಟುಂಬಗಳನ್ನು ಇಲ್ಲಿಂದ ಸ್ಥಳಾಂತರಿಸಲಾಗಿತ್ತು. ತೆಂಗುಗಳು ನೀರುಪಾಲಾಗಿದ್ದವು. ೨೦೦ ಮೀಟರ್‌ನೊಳಗಿನ ಕರಾವಳಿ ಪ್ರದೇಶವಾದ ಕಾರಣ ಯಾವುದಕ್ಕೂ ನಷ್ಟ ಪರಿಹಾರ ಲಭ್ಯವಾಗಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಸಂದರ್ಶನ ನಡೆಸಿದರೂ ಫಲವುಂಟಾಗಿಲ್ಲ.
ಈ ವರ್ಷ ಬೇಸಿಗೆ ಮಳೆ ಆರಂಭವಾಗಿರುವುದಷ್ಟೆ. ಆವಾಗಲೇ ಕಡಲ್ಕೊರೆತ ಉಂಟಾಗುತ್ತಿದೆ. ಕಳೆದ ವರ್ಷ ನಿರ್ಮಿಸಿದ ತಡೆಗೋಡೆಯ ಉಳಿದ ಭಾಗಗಳನ್ನು ಕೂಡಾ ಸಮುದ್ರ ಕಸಿಯುತ್ತಿದೆ. ಪರಿಸರ ನಿವಾಸಿಗಳು ಹೆಚ್ಚು ನಿರೀಕ್ಷೆ ಇರಿಸಿದ ‘ಜಿಯೋಬ್ಯಾಗ್’ ಪರೀಕ್ಷಾರ್ಥ ನಿರ್ಮಿಸಿದ ಸಮುದ್ರ ತಡೆಗೋಡೆ ಕೂಡಾ ಬೆದರಿಕೆ ಎದುರಿಸುತ್ತಿದೆ. ಇದು ಕೂಡಾ ಸಮುದ್ರ ಪಾಲಾದರೆ ಇನ್ನೇನು ಮಾಡಬೇಕೆಂಬ ಪ್ರಶ್ನೆ ಸ್ಥಳೀಯರಲ್ಲಿ ಉದಿಸಿದೆ. ಕಳೆದ ಒಂದು ವರ್ಷದಿಂದ ಸಮುದ್ರದಲ್ಲಿ ಮೀನಿನ ಸಂತತಿ ಕಡಿಮೆಯಾಗಿದ್ದು, ಈ ಮಧ್ಯೆ ಕಡಲ್ಕೊರೆತವುಂಟಾದರೆ ತೀರ ಪ್ರದೇಶದ ಜನರ ಸಂಕಷ್ಟ ಇಮ್ಮಡಿಯಾಗಲಿದೆ.