ಪೈವಳಿಕೆ: ನಾಪತ್ತೆಯಾಗಿದ್ದ 15ರ ಹರೆಯದ ಬಾಲಕಿ, ಆಟೋ ಚಾಲಕನ ಸಾವು: ಮುಂದುವರಿದ ನಿಗೂಢತೆ; ಮರಣೋತ್ತರ ಪರೀಕ್ಷೆ ಇಂದು ಪರಿಯಾರಂನಲ್ಲಿ
ಕುಂಬಳೆ: ನಾಪತ್ತೆಯಾಗಿ 26 ದಿನಗಳ ಬಳಿಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕನ ಮೃತದೇಹಗಳ ಸಮಗ್ರ ಮರಣೋತ್ತರ ಪರೀಕ್ಷೆ ಇಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಯಲಿದೆ.
ಪೈವಳಿಕೆ ಪಂಚಾಯತ್ ವ್ಯಾಪ್ತಿಯ ನಿವಾಸಿಯಾದ ೧೫ರ ಹರೆಯದ ವಿದ್ಯಾರ್ಥಿನಿ ಹಾಗೂ ಮಂಡೆಕಾಪು ನಿವಾಸಿಯಾದ ಪ್ರದೀಪ್ (42) ಎಂಬಿವರ ಮೃತದೇ ಹಗಳು ಮಂಡೆಕಾಪಿನ ಹಿತ್ತಿಲಿನಲ್ಲಿ ರುವ ಮರದಲ್ಲಿ ನೇಣುಬಿ ಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಇಬ್ಬರ ಸಾವಿನಲ್ಲಿ ನಿಗೂಢತೆಗಳು ಹುಟ್ಟಿಕೊಂಡಿವುದಾಗಿ ಪೊಲೀಸ್ ಮೂಲಗಳು ತಿಳಿಸುತ್ತಿವೆ.ಈ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಮಹಜರು ನಡೆಸಿದ ಬಳಿಕ ಸಮಗ್ರ ಮರಣೋತ್ತರ ಪರೀಕ್ಷೆ ನಡೆಸಲು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕಳೆದ ಫೆಬ್ರವರಿ 12ರಂದು ಮುಂಜಾನೆಯಿಂದ ಬಾಲಕಿ ನಾಪತ್ತೆ ಯಾಗಿದ್ದಳು. ಸಹೋದರಿಯೊಂದಿಗೆ ನಿದ್ರಿಸಿದ್ದ ಬಾಲಕಿ ಮನೆಯ ಹಿಂಬಾ ಗಿಲು ತೆರೆದು ಹೊರಗೆ ತೆರಳಿರುವುದಾಗಿ ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಆಟೋ ಚಾಲಕನಾದ ಪ್ರದೀಪ್ ಕೂಡಾ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸೈಬರ್ ಸೆಲ್‌ನ ಸಹಾಯದಿಂದ ತನಿಖೆ ನಡೆಸಿದಾಗ ಅವರಿಬ್ಬರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿತ್ತು. ಇದರಿಂದ ಡ್ರೋನ್ ಬಳಸಿ, ಶ್ವಾನದಳದ ಸಹಾಯದಿಂದ ತನಿಖೆ ನಡೆಸಿದರೂ ಯಾವುದೇ ಮಾಹಿತಿ ಲಭಿಸಿರಲಿಲ್ಲ. ಬಾಲಕಿಯನ್ನು ಪತ್ತೆಹಚ್ಚಲಾಗದ ಹಿನ್ನೆಲೆಯಲ್ಲಿ ಹೆತ್ತವರು ಇತ್ತೀಚೆಗೆ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹಲವು ದಿನಗಳು ಕಳೆದರೂ ಬಾಲಕಿ ಪತ್ತೆಯಾಗದಿರುವುದರಿಂದ ಪೊಲೀಸರು ಪರಿಶೀಲನೆ ತೀವ್ರಗೊಳಿಸಿದ್ದರು. ಇದರಂತೆ ನಿನ್ನೆ ಬೆಳಿಗ್ಗೆ ನಾಗರಿಕರ ಸಹಾಯದೊಂದಿಗೆ ಮಂಡೆಕಾಪು ಪರಿಸರ ಪ್ರದೇಶದಲ್ಲಿ ಶೋಧ ಆರಂಭಿಸಲಾಗಿತ್ತು. ಡಿವೈಎಸ್ಪಿ ಪಿ. ಸುನಿಲ್ ಕುಮಾರ್, ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ವಿನೋದ್ ಕುಮಾರ್, ಕಾಸರಗೋಡು ಮಹಿಳಾ ಪೊಲೀಸ್ ಠಾಣೆ ಟ್ರಾಫಿಕ್ ಯೂನಿಟ್, ವಿದ್ಯಾನಗರ, ಬದಿ ಯಡ್ಕ, ಮಂಜೇಶ್ವರ ಠಾಣೆಗಳ ಎಸ್‌ಐಗಳು ಒಳಗೊಂಡ ಪೊಲೀಸ್ ತಂಡ ನಿನ್ನೆ ಶೋಧ ನಡೆಸಿದೆ. ಕ್ಲಬ್ ಹಾಗೂ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರೂ, ಜನಪ್ರತಿನಿಧಿ ಗಳೂ ಶೋಧದಲ್ಲಿ ಪಾಲ್ಗೊಂಡಿದ್ದರು. ಶೋಧ ವೇಳೆ ಬಾಲಕಿ ಹಾಗೂ ಯುವಕನ ಮೃತದೇಹಗಳು ಮಂಡೆಕಾಪಿನ ಕಿತ್ತಿಲೊಂದರಲ್ಲಿ ಒಂದೇ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊಬೈಲ್ ಫೋನ್‌ಗಳ ಡಿಸ್‌ಪ್ಲೇಯನ್ನು ಕಲ್ಲಿನಿಂದ ಜಲ್ಲಿ ಹಾನಿಗೊಳಿಸಿದ ಸ್ಥಿತಿಯಲ್ಲಿದೆ. ಅದೇ ಸ್ಥಳದಲ್ಲಿ ಒಂದು ಚಾಕು ಹಾಗೂ ಎರಡು ಮೊಬೈಲ್ ಫೋನ್‌ಗಳು ಪತ್ತೆಯಾಗಿತ್ತು.