ಪೈವಳಿಕೆ ಪಂ.ನಲ್ಲಿ ಅವಿಶ್ವಾಸ ಗೊತ್ತುವಳಿ: ಲೀಗ್ ಬೆಂಬಲದಿಂದ ಅಧ್ಯಕ್ಷ ಸ್ಥಾನ ಉಳಿಸಿಕೊಂಡ ಸಿಪಿಎಂ; ಬಿಜೆಪಿಯನ್ನು ಬೆಂಬಲಿಸಿದ ಕಾಂಗ್ರೆಸ್ ಸದಸ್ಯನ ಅಮಾನತು

ಪೈವಳಿಕೆ: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ಪೈವಳಿಕೆ ಪಂಚಾಯತ್‌ನಲ್ಲಿ ನಡೆದ  ರಾಜಕೀಯ ವಿದ್ಯಮಾನಗಳು ನಾಡಿನಲ್ಲಿ  ಚರ್ಚೆಗೆ ಗ್ರಾಸವಾಗಿದೆ. ಸಿಪಿಎಂ ಸದಸ್ಯೆಯಾದ   ಪಂಚಾಯತ್ ಅಧ್ಯಕ್ಷೆಯಾದ ಜಯಂತಿ ವಿರುದ್ಧ ಬಿಜೆಪಿ ಮಂಡಿಸಿದ ಅವಿಶ್ವಾಸ ಗೊತ್ತುವಳಿಯನ್ನು ಕಾಂಗ್ರೆಸ್‌ನ ಓರ್ವ ಸದಸ್ಯ ಬೆಂಬಲಿಸಿದ್ದಾರೆ. ಇದೇ ವೇಳೆ ಮುಸ್ಲಿಂ ಲೀಗ್‌ನ ಇಬ್ಬರು ಸದಸ್ಯರು  ಸಿಪಿಎಂನ್ನು ಬೆಂಬಲಿಸಿ ಮತ ಚಲಾಯಿಸಿದ್ದಾರೆ. ಇದರಿಂದ ಬಿಜೆಪಿ ಮಂಡಿಸಿದ ಅವಿಶ್ವಾಸ ಗೊತ್ತುವಳಿ ಪರಾಭವಗೊಂಡಿತು.  ಇದರಿಂದ ಸಿಪಿಎಂ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಂಡಿದೆ.  ಇದೇ ಸಂದರ್ಭದಲ್ಲಿ ಬಿಜೆಪಿಯ ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸಿದ ಕಾಂಗ್ರೆಸ್ ಸದಸ್ಯನನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಒಟ್ಟು ೧೯ ಮಂದಿ ಸದಸ್ಯರುಳ್ಳ ಪೈವಳಿಕೆ ಪಂಚಾಯತ್ ಆಡಳಿತ ಸಮಿತಿಯಲ್ಲಿ ಬಿಜೆಪಿಗೆ ಎಂಟು ಮಂದಿ ಸದಸ್ಯರಿದ್ದು, ಸಿಪಿಎಂಗೆ ಏಳು, ಸಿಪಿಐ ಓರ್ವ ಸದಸ್ಯನನ್ನು ಹೊಂದಿದೆ.

ಇದೇ ವೇಳೆ ಯುಡಿಎಫ್‌ನಲ್ಲಿ ಮುಸ್ಲಿಂ ಲೀಗ್‌ಗೆ ಇಬ್ಬರು, ಕಾಂಗ್ರೆಸ್‌ಗೆ ಓರ್ವಸದಸ್ಯರಿದ್ದಾರೆ.

ಪಂಚಾಯತ್ ಅಭಿವೃದ್ಧಿಗೆ ಸಂಬಂಧಿಸಿ ಪಕ್ಷಪಾತ ನೀತಿ ಅನುಸರಿಸಲಾಗುತ್ತಿದೆಯೆಂದು ಆರೋಪಿಸಿ ಪಂಚಾಯತ್ ಅಧ್ಯಕ್ಷೆ ವಿರುದ್ಧ ಬಿಜೆಪಿಯ ಎಂಟು ಮಂದಿ ಸದಸ್ಯರು ಅವಿಶ್ವಾಸ ಗೊತ್ತುವಳಿಗೆ ನೋಟೀಸು ನೀಡಿದ್ದರು. ಈ ಬಗ್ಗೆ ನಿನ್ನೆ ನಡೆದ ಮತದಾನದಲ್ಲಿ ಇಬ್ಬರು ಲೀಗ್ ಸದಸ್ಯರು ಸಿಪಿಎಂಗೆ ಮತ ಚಲಾಯಿಸಿದ್ದರು. ಇದರಿಂದ ಗೊತ್ತುವಳಿ ವಿರುದ್ಧ ೧೦ ಮಂದಿ ಸದಸ್ಯರ ಬೆಂಬಲ ಲಭಿಸಿತು. ಅವಿಶ್ವಾಸ ಗೊತ್ತುವಳಿ ಮಂಡಿಸಿದ  ಬಿಜೆಪಿಯ ಎಂಟು ಮಂದಿ ಸದಸ್ಯರನ್ನು ಓರ್ವ ಕಾಂಗ್ರೆಸ್ ಸದಸ್ಯ ಬೆಂಬಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪಂ. ಅಧ್ಯಕ್ಷೆ ವಿರುದ್ಧ ಬಿಜೆಪಿ ಮಂಡಿಸಿದ ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸಿ ಮತ ಚಲಾಯಿಸಿದ ಕಾಂಗ್ರೆಸ್ ಸದಸ್ಯ ಅವಿನಾಶ್ ಮಚಾದೋ ಅವರನ್ನು ಕಾಂಗ್ರೆಸ್ ನಿಂದ ಅಮಾನತು ಗೊಳಿಸಿರುವುದಾಗಿ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ತಿಳಿಸಿದ್ದಾರೆ. ೧೫ನೇ ವಾರ್ಡ್ ಸದಸ್ಯರಾದ  ಅವಿನಾಶ್ ಪಂಚಾಯತ್‌ನಲ್ಲಿ ಕಾಂಗ್ರೆಸ್‌ನ ಏಕೈಕ ಸದಸ್ಯರಾಗಿದ್ದಾರೆ. ಅವಿನಾಶ್‌ರನ್ನು  ಅಮಾನತುಗೊಳಿಸುವು ದರೊಂದಿಗೆ ಪಂಚಾಯತ್‌ನಲ್ಲಿ ಕಾಂಗ್ರೆಸ್‌ಗೆ ಸದಸ್ಯರಿಲ್ಲದಂತಾಗಿದೆ. ಪಂಚಾ ಯತ್‌ನಲ್ಲಿ   ಬಿಜೆಪಿ ಸದಸ್ಯೆಯಾದ ಪುಷ್ಪಲಕ್ಷ್ಮಿ ಉಪಾಧ್ಯಕ್ಷೆಯಾಗಿದ್ದಾರೆ.

ಇದೇ ವೇಳೆ ಅವಿಶ್ವಾಸ ಗೊತ್ತುವಳಿ ಮತದಾನದಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಸದಸ್ಯ, ಸಿಪಿಎಂನ್ನು ಲೀಗ್ ಸದಸ್ಯರು ಬೆಂಬಲಿಸಿರುವುದು ಪಂಚಾಯತ್‌ನಲ್ಲಿ ಚರ್ಚೆಯ ವಿಷಯವಾಗಿದೆ.

ಲೋಕಸಭಾ ಚುನಾವಣೆಯಲ್ಲಿ  ಎಲ್‌ಡಿಎಫ್ ವಿರುದ್ಧ ಯುಡಿಎಫ್ ತೀವ್ರ ಪೈಪೋಟಿಗಿಳಿದಿರುವಾಗ ಯುಡಿಎಫ್‌ನ ಪ್ರಧಾನ ಘಟಕ ಪಕ್ಷವಾದ ಮುಸ್ಲಿಂ ಲೀಗ್ ಸದಸ್ಯರು ಸಿಪಿಎಂನ್ನು ಬೆಂಬಲಿಸಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆಯೆಂದೂ ಹೇಳಲಾಗುತ್ತಿದೆ.

You cannot copy contents of this page