ಪೈವಳಿಕೆ: ಪಂಚಾಯತ್‌ನಲ್ಲಿ ಎಡರಂಗ ಹಾಗೂ ಐಕ್ಯರಂಗ ಮಧ್ಯೆ ಒಪ್ಪಂದ ರಾಜಕೀಯ ಆಡಳಿತ ನಡೆಯುತ್ತಿದೆ ಎಂದು ಬಿಜೆಪಿ ಆರೋಪ ಸತ್ಯಕ್ಕೆ ದೂರವೆಂದು ಸಿಪಿಎಂ ಪೈವಳಿಕೆ ಪಂಚಾಯತ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಪೈವಳಿಕೆ ಪಂಚಾಯತ್ ಆಡಳಿತ ಮಂಡಳಿ ತೀರ್ಮಾನಿಸಿದ ಎಲ್ಲಾ ಜನಪರ ಕಾರ್ಯಗಳು ಸರಕಾರ ನಿರ್ದೇಶಿಸಿದ ಎಲ್ಲಾ ಕಾರ್ಯಗಳು ಸಕಾಲದಲ್ಲಿ ನಡೆಯುತ್ತಿದೆ. ಹಸಿರುಕ್ರಿಯಾ ಸೇನೆಯ ಸದಸ್ಯೆಯರು ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಪಂಚಾಯತ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಅಸತ್ಯ ಆರೋಪಗಳನ್ನು ಬಿಜೆಪಿ ಹೊರಿಸಿ ನಾಟಕವಾಡುತ್ತಿದೆಯೆಂದು ಸಿಪಿಎಂ ದೂರಿದೆ. ಚೀಟಿ ಎತ್ತುವ ಮೂಲಕ ಬಿಜೆಪಿಗೆ ಇಲ್ಲಿ ಉಪಾಧ್ಯಕ್ಷ ಸ್ಥಾನವಿದ್ದು, ಬಿಜೆಪಿಯ ಈ ರಾಜಕೀಯ ನಾಟಕ ಜನರಿಗೆ ತಿಳಿದಿದೆಯೆಂದು ಸಿಪಿಎಂ ಪ್ರಕಟಣೆಯಲ್ಲಿ ತಿಳಿಸಿದೆ. ಪೈವಳಿಕೆ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ ಆಡಳಿತ ನಡೆಸುತ್ತಿರುವವರಿಗೆ ಪಂಚಾಯತ್ ರಾಜಕೀಯ ಒಪ್ಪಂದದ ಬಗ್ಗೆ ಆರೋಪಿಸುವ ನೈತಿಕ ಹಕ್ಕಿಲ್ಲವೆಂದು ಸಿಪಿಎಂ ಪ್ರಕಟಣೆಯಲ್ಲಿ ತಿಳಿಸಿದೆ.
