ಪೈವಳಿಕೆ: ಬಾಲಕಿ ಹಾಗೂ ಆಟೋ ಚಾಲಕನ ಸಾವು ಆತ್ಮಹತ್ಯೆ-ಮರಣೋತ್ತರ ಪರೀಕ್ಷಾ ವರದಿ; ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಪೊಲೀಸರಿಗೆ ಹೈಕೋರ್ಟ್‌ನ ತರಾಟೆ
ಕುಂಬಳೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ನಿವಾಸಿಯಾದ ಹತ್ತನೇ ತರಗತಿ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕನಾದ ಮಂಡೆಕಾಪು ನಿವಾಸಿ ಪ್ರದೀಪ್ (42) ಎಂಬವರ ಸಾವು ಆತ್ಮಹತ್ಯೆಯಾಗಿದೆಯೆಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮೃತದೇಹಗಳ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಸಮಗ್ರ ವರದಿ ರಾಸಾಯನಿಕ ತಪಾಸಣೆ ಬಳಿಕವೇ ಲಭಿಸಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. 20 ದಿನಗಳಿಗಿಂತ ಹೆಚ್ಚು ಹಳಮೆಯಾದ ಮೃತದೇಹಗಳು ಒಣಗಿದ ಸ್ಥಿತಿಯಲ್ಲಿದ್ದುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಫೆಬ್ರವರಿ 12ರಂದು ಮುಂಜಾನೆಯಿಂದ ನಾಪತ್ತೆಯಾದ ಬಾಲಕಿ ಹಾಗೂ ಆಟೋ ಚಾಲಕ ಮಾರ್ಚ್ ೯ರಂದು ಮಧ್ಯಾಹ್ನ ವೇಳೆ ಮಂಡೆಕಾಪುವಿನ ಹಿತ್ತಿಲಿನಲ್ಲಿ ಮರಕ್ಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಇದೇ ವೇಳೆ ಬಾಲಕಿ ನಾಪತ್ತೆಯಾದ ಘಟನೆಗೆ ಸಂಬಂಧಿಸಿ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ವಿಐಪಿಯ ಮಗಳು ನಾಪತ್ತೆಯಾಗುತ್ತಿದ್ದಲ್ಲಿ ಪೊಲೀಸರು ಇಂತಹ ನಿಲುವು ಕೈಗೊಳ್ಳುತ್ತಿದ್ದರೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಬಡವರನ್ನು ಹಾಗೂ ವಿಐಪಿಗಳನ್ನು ಒಂದೇ ರೀತಿಯಲ್ಲಿ ನೋಡಬೇಕೆಂದು ನ್ಯಾಯಾಲಯ ತಿಳಿಸಿದೆ.
ಬಾಲಕಿಯ ತಾಯಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪರಿಗಣಿಸಿ ಹೈಕೋರ್ಟ್ ಈ ರೀತಿ ನಿರ್ದೇಶ ನೀಡಿದೆ. ಬಾಲಕಿಯ ನಾಪತ್ತೆ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಗಂಭೀರ ಲೋಪ ಉಂಟಾಗಿದೆ ಯೆಂದೂ ನ್ಯಾಯಾಲಯ ತಿಳಿಸಿದೆ. ಕೇಸಿನ ಡೈರಿಯೊಂದಿಗೆ ತನಿಖಾಧಿಕಾರಿ ಇಂದು ನೇರವಾಗಿ ಹಾಜರಾಗ ಬೇಕೆಂದೂ ನ್ಯಾಯಾಲಯ ತಿಳಿಸಿದೆ.
ಮೃತದೇಹಗಳ ಅಂತ್ಯಸಂಸ್ಕಾರ
ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಬಾಲಕಿ ಹಾಗೂ ಪ್ರದೀಪರ ಮೃತದೇಹಗಳನ್ನು ನಿನ್ನೆ ಮನೆಗಳಿಗೆ ತಲುಪಿಸಲಾಯಿತು. ಅನಂತರ ಬಾಲಕಿಯ ಮೃತದೇಹವನ್ನು ಸಮೀಪದ ಸ್ಮಶಾನದಲ್ಲಿ ಹಾಗೂ ಪ್ರದೀಪ್‌ರ ಮೃತದೇಹವನ್ನು ಮನೆ ಹಿತ್ತಿಲಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.