ಪೊನೆಂಗಳದಲ್ಲಿ ಸಿಪಿಎಂ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ: ಮೂವರಿಗೆ ಗಾಯ
ಕುಂಬಳೆ: ಪುತ್ತಿಗೆ ಪಂಚಾಯತ್‌ನ ಮುಗು ಪೊನ್ನೆಂಗಳದಲ್ಲಿ ಕಾಂಗ್ರೆಸ್-ಸಿಪಿಎಂ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಕಾಂಗ್ರೆಸ್ ಪುತ್ತಿಗೆ ಮಂಡಲ ಅಧ್ಯಕ್ಷ ಊಜಂಪದವಿನ ಸುಲೈಮಾನ್ (51)ರನ್ನು ಕಾಸರಗೋಡು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ, ಸಿಪಿಎಂ ಕಾರ್ಯಕರ್ತರಾದ ಮುಗು ವಿನ ನವಾಬ್ (32), ಅಬೂಬಕ್ಕರ್ ಸಿದ್ದಿಕ್ (32) ಎಂಬಿವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಪೊನ್ನೆಂಗಳದಲ್ಲಿ ಘರ್ಷಣೆ ನಡೆದಿದೆ. ಈ ಮೂರು ಮಂದಿ ಪೊನ್ನೆಂಗಳದಲ್ಲಿ ನಿನ್ನೆ ನಡೆದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಉಂಟಾದ ತರ್ಕವೇ ಘರ್ಷಣೆಗೆ ಕಾರಣವೆಂದು ಹೇಳಲಾಗುತ್ತಿದೆ. ಗೃಹಪ್ರವೇಶ ಕಾರ್ಯಕ್ರಮ ನಡೆದ ಮನೆಯಲ್ಲಿ ಅಸಭ್ಯವಾಗಿ ನಿಂದಿಸಿದ್ದು, ಉದ್ದೇಶಪೂರ್ವಕ ಘರ್ಷಣೆ ಸೃಷ್ಟಿಸಿರುವುದಾಗಿ ಸುಲೈಮಾನ್ ಆರೋಪಿಸಿದ್ದಾರೆ. ಇದೇ ವೇಳೆ ಬಸ್ ತಂಗುದಾಣವನ್ನು ಕೆಡವಿದುದಕ್ಕೆ ಸಂಬಂಧಿಸಿ ಆರೋಪಹೊರಿಸಿದ್ದು ಅ ದನ್ನು ಪ್ರಶ್ನಿಸಿದ ದ್ವೇಷದಿಂದ ತಮ್ಮ ಮೇಲೆ ಹಲ್ಲೆಗೈದಿರುವುದಾಗಿ ಸಿಪಿಎಂ ಕಾರ್ಯಕರ್ತರು ತಿಳಿಸಿದ್ದಾರೆ.
ಮಂಡಲ ಕಮಿಟಿ ಅಧ್ಯಕ್ಷರ ಮೇಲೆ ಉಂಟಾದ ಹಲ್ಲೆಯನ್ನು ಮುಸ್ಲಿಂ ಲೀಗ್ ನೇತಾರರಾದ ಅಸೀಸ್ ಮರಿಕೆ, ಎ.ಕೆ. ಆರೀಫ್, ಉಬೈದುಲ್ಲಾ ಮೊದಲಾ ದವರು ಪ್ರತಿಭಟಿಸಿದ್ದಾರೆ. ಹಲ್ಲೆಯನ್ನು ಖಂಡಿಸಿ ಇಂದು ಸಂಜೆ ಸೀತಾಂಗೋಳಿ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವು ದಾಗಿ ನೇತಾರರು ತಿಳಿಸಿದ್ದಾರೆ. ಘರ್ಷಣೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪಟ್ರೋಲಿಂಗ್ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.