ಪೊಲೀಸರಿಗೆ ಹೆದರಿ ಎಂಡಿಎಂಎ ಪ್ಯಾಕೆಟ್ ನುಂಗಿದ ಯುವಕ ಮೃತ್ಯು
ಕಲ್ಲಿಕೋಟೆ: ಪೊಲೀಸರನ್ನು ಕಂಡು ಹೆದರಿ ಕೈಯಲ್ಲಿದ್ದ ಎಂಡಿಎಂಎ ಮಾದಕದ್ರವ್ಯ ಪ್ಯಾಕೆಟ್‌ನ್ನು ನುಂಗಿದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಕಲ್ಲಿಕೋಟೆಯಲ್ಲಿ ನಡೆದಿದೆ. ಕಲ್ಲಿಕೋಟೆ ಮೈಕಾವು ನಿವಾಸಿ ಈಯಾಡನ್ ಶಾನಿದ್ (28) ಸಾವನ್ನಪ್ಪಿದ ಯುವಕ. ಕಲ್ಲಿಕೋಟೆ ತಾಮರಶ್ಶೇರಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ತಾಮರಶ್ಶೇರಿಯಲ್ಲಿ ಪೊಲೀಸರು ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವೇಳೆ ಆ ದಾರಿಯಾಗಿ ಸಾಗುತ್ತಿದ್ದ ಶಾನಿದ್‌ನನ್ನು ಕಂಡು ಆತನ ದೇಹ ತಪಾಸಣೆ ನಡೆಸಿದಾಗ ಕೈಯಲ್ಲಿ ಎಂಡಿಎಂಎ ಪ್ಯಾಕೆಟ್ ಪತ್ತೆಹಚ್ಚಿದ್ದಾರೆ. ಆ ಕೂಡಲೇ ಆತ ಪ್ಯಾಕೆಟ್‌ನ್ನು ಪೊಲೀಸರ ಸಮ್ಮುಖದಲ್ಲೇ ನುಂಗಿದ್ದಾನೆ. ಅದನ್ನು ಕಂಡ ಪೊಲೀಸರು ಆತನನ್ನು ತಕ್ಷಣ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ನಡೆಸಲಾದ ಎಂಡೋಸ್ಕೋಪಿಕ್ ಪರೀಕ್ಷೆಯಲ್ಲಿ ಆತನ ಹೊಟ್ಟೆಯಲ್ಲಿ ಬಿಳಿ ಬಣ್ಣದ ಪ್ಯಾಕೆಟ್‌ಗಳು ಪತ್ತೆಯಾಗಿವೆ. ತಕ್ಷಣ ಆತನಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿ ತಾದರೂ ಅದು ಫಲಕಾರಿಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾನೆ. ಇದೇ ಸಂದರ್ಭದಲ್ಲಿ ಸಾವನ್ನಪ್ಪಿದ ಶಾನಿದ್‌ನ ವಿರುದ್ಧ ಪೊಲೀ ಸರು ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಶಾನಿದ್ ಈ ಹಿಂದೆಯೂ ಇಂತಹ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಾಮರಶ್ಶೇರಿ ಮತ್ತು ಕೋಡಂಚೇರಿ ಪೊಲೀಸ್ ಠಾಣೆಗಳಲ್ಲೂ ಈತನ ವಿರುದ್ಧ ಮಾದಕದ್ರವ್ಯ ಕೇಸುಗಳಿವೆ ಯೆಂದು ಪೊಲೀಸರು ತಿಳಿಸಿದ್ದಾರೆ.