ಕಾಸರಗೋಡು: ಪೊಲೀಸ್ ಜೀಪು ಸೇರಿ ಮೂರು ವಾಹನಗಳು ಪರಸ್ಪರ ಢಿಕ್ಕಿ ಹೊಡೆದು ಆ ದಾರಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಪಡನ್ನಕ್ಕಾಡ್ ನೆಹರೂ ಕಾಲೇಜು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಡೆದಿದೆ. ಪಡನ್ನಕ್ಕಾಡ್ ಕರುವಿಳಂ ಪಿಳ್ಳೇರು ಪೀಡಿಗೆಯಿಲ್‌ನ ಮೊಹಮ್ಮದ್ ಶಫೀಕ್ ಎಂಬವರ ಪತ್ನಿ ಸುಹರಾ (48) ಸಾವನ್ನಪ್ಪಿದ ಮಹಿಳೆ.
ಹೊಸದುರ್ಗ ಭಾಗದಿಂದ ಬರುತ್ತಿದ್ದ ಚೀಮೇನಿ ಪೊಲೀಸ್ ಠಾಣೆಯ ಜೀಪು ಎದುರುಗಡೆಯಿಂದ ಬರುತ್ತಿದ್ದ ವಾಹನಗಳಿಗೆ ಢಿಕ್ಕಿ ಹೊಡೆಯದಿರಲು ಬದಿಗೆ ಸರಿಸಿದಾಗ ಆ ದಾರಿಯಾಗಿ ಬರುತ್ತಿದ್ದ ದ್ವಿಚಕ್ರ ವಾಹನ, ಕಾರು ಮತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಹರಾರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಸುಹರಾರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಅವರು ಅಸು ನೀಗಿದರು. ಅಪಘಾತಕ್ಕೊಳಗಾದ ದ್ವಿಚಕ್ರ ವಾಹನದ ಪ್ರಯಾಣಿಕರಾದ ನೀಲೇಶ್ವರ ಸಹಕಾರಿ ಬ್ಯಾಂಕ್‌ನ ನಿವೃತ್ತ ಕಾರ್ಯದರ್ಶಿ ಎನ್.ವಿ. ಚಂದ್ರನ್ ಮತ್ತು ಅವರ ಪತ್ನಿ ಬೇಬಿ ಕೂಡಾ ಗಾಯಗೊಂಡಿದ್ದು, ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.