ಪ್ರಧಾನಿ ಮೋದಿಯ ಭಾಷಣದೊಂದಿಗೆ 18ನೇ ಲೋಕಸಭೆಯ ಪ್ರಥಮ ಅಧಿವೇಶನ ಆರಂಭ
ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದೊಂ ದಿಗೆ ಇಂದು ಬೆಳಿಗ್ಗೆ ಆರಂಭಗೊಂಡಿದೆ.
18ನೇ ಲೋಕಸಭೆಗೆ ಆಯ್ಕೆಗೊಂಡ ಎಲ್ಲರನ್ನೂ ಸ್ವಾಗತಿಸಿ ಅವರಿಗೆ ಶುಭಾಶಂಸನೆ ಕೋರಿದ ಪ್ರಧಾನಮಂತ್ರಿಯವರು ಎಲ್ಲರ ಸಹಕಾರ ಖಾತರಿಪಡಿಸಲು ನಾನು ತೀವ್ರ ಯತ್ನಿಸುವೆ ಎಂದು ಹೇಳಿದರು. ಭಾರತೀಯ ಸಂವಿಧಾನ ಪ್ರಕಾರ ಮುಂದಕ್ಕೆ ಸಾಗುವೆ. ಇದು ಪ್ರಜಾತಂತ್ರದ ಇತಿಹಾಸದ ದಿನವಾಗಿದೆ. ನಾನು ಪ್ರಧಾನಮಂತ್ರಿಯಾದ ಈ ಮೂರನೇ ಹಂತದಲ್ಲಿ ಕಳೆದ ಎರಡು ಬಾರಿ ನಡೆಸಿದ ಪ್ರಯತ್ನಕ್ಕಿಂತಲೂ ಮೂರು ಪಟ್ಟು ಹೆಚ್ಚು ದೇಶಕ್ಕಾಗಿ ದುಡಿಯುವೆ. ವಿಪಕ್ಷಗಳು ಜನರ ಒಳಿತಿಗಾಗಿ ಒಗ್ಗೂಡಿ ಪ್ರಯತ್ನಿಸಬೇಕು. ಹೊಣೆಗಾರಿಕೆ ಹೊಂದಿರುವ ವಿಪಕ್ಷವಾಗಿ ಅವರು ತಮ್ಮ ಕರ್ತವ್ಯ ನಿರ್ವಹಿಸಬೇಕೆಂದೂ ಪ್ರಧಾನಿ ಹೇಳಿದರು. ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಮುಖಂಡ ಭರ್ತೃ ಹರಿ ಮಹತಾಬ್‌ರನ್ನು ರಾಷ್ಟ್ರಪತಿ ಈಗಾಗಲೇ ನೇಮಿಸಿದ್ದಾರೆ. ಇದರ ಜೊತೆಗೆ ಲೋಕಸಭೆಗೆ ಹೊಸದಾಗಿ ಆಯ್ಕೆಗೊಂಡ ವರ ಪ್ರಮಾಣವಚನ ಸ್ವೀಕಾರ ಕ್ರಮವೂ ಇಂದು ಬೆಳಿಗ್ಗೆ ಆರಂಭಗೊಂಡಿತು. ಹಂಗಾಮಿ ಸ್ಪೀಕರ್ ಭರ್ತೃ ಹರಿಯವರು ಪ್ರಮಾಣವಚನ ಬೋಧಿಸಿದರು. ಪ್ರಮಾಣವಚನ ಸ್ವೀಕಾರ ನಾಳೆ ತನಕ ಮುಂದುವರಿಯಲಿದೆ. ಜೂನ್ 29ಕ್ಕೆ ಹೊಸ ಸ್ಪೀಕರ್ ಆಯ್ಕೆ ನಡೆಯಲಿದೆ. ಇದಾದ ಬಳಿಕ ಜೂನ್ 27ರಂದು ಸಂಸತ್‌ನ ಉಭಯ ಸದನ ಅಂದರೆ ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಲಿದ್ದಾರೆ.
ಹೊಸ ಸರಕಾರದ ಮೊದಲ ಲೋಕಸಭಾ ಅಧಿವೇಶನದಲ್ಲಿ ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿರಿಸಿಕೊಂಡು ಕೇಂದ್ರ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಲು ವಿಪಕ್ಷಗಳು ಸಜ್ಜಾಗಿ ನಿಂತಿವೆ. ಇದರಿಂದಾಗಿ ಲೋಕಸಭಾ ಅಧಿವೇಶನ ಅಲ್ಲೋಲ ಕಲ್ಲೋಲ ಗೊಳ್ಳುವ ಸಾಧ್ಯತೆಯೂ ಇದೆ.