ಪ್ರವಾಸಕ್ಕಾಗಿ ಕುಟುಂಬ ಸಮೇತ ಬೆಂಗಳೂರಿನಿಂದ ಕಾಸರಗೋಡಿಗೆ ಬಂದ ಯುವಕ ಸಮುದ್ರದಲ್ಲಿ ಮುಳುಗಿ ಮೃತ್ಯು
ಕುಂಬಳೆ: ಬೆಂಗಳೂರಿನಿಂದ ಪ್ರವಾಸಕ್ಕಾಗಿ ಕಾಸರಗೋಡಿಗೆ ಬಂದ ಕುಟುಂಬದ ಸದಸ್ಯನಾದ ಯುವಕ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಬೆಂಗಳೂರು ಜಯನಗರ ನಿವಾಸಿ ಮೀರ್ ಮುಹಮ್ಮದ್ ಶಾಫಿ (33) ಎಂಬವರು ಮೃತಪಟ್ಟ ದುರ್ದೈವಿಯಾಗಿ ದ್ದಾರೆ. ನಿನ್ನೆ ಸಂಜೆ ಮೊಗ್ರಾಲ್ ಕಡಪ್ಪುರ ದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಮೀರ್ ಮುಹಮ್ಮದ್ ಶಾಫಿ ಹಾಗೂ ಕುಟುಂಬ ಎರಡು ದಿನಗಳ ಹಿಂದೆ ಮೊಗ್ರಾಲ್‌ನ ಖಾಸಗಿ ರೆಸಾರ್ಟ್‌ಗೆ ತಲುಪಿತ್ತು. ನಿನ್ನೆ ಸಂಜೆ ಇವರು ಮೊಗ್ರಾಲ್ ಕಡಪ್ಪುರಕ್ಕೆ ತಲುಪಿದ್ದರು. ಇವರ ಜತೆಗಿದ್ದ ಮಗು ಅಲೆಗಳಲ್ಲಿ ಸಿಲುಕಿದ್ದು, ಈ ವೇಳೆ ಮಗುವನ್ನು ರಕ್ಷಿಸಲು ಮೀರ್ ಮುಹಮ್ಮದ್ ಶಾಫಿ ನೀರಿಗಿಳಿದಿದ್ದಾರೆ. ಮಗುವನ್ನು ದಡಕ್ಕೆ ತಲುಪಿಸಿದಾಕ್ಷಣವೇ ಭಾರೀ ಎತ್ತರದ ಅಲೆ ಅಪ್ಪಳಿಸಿದ್ದು, ಅದರಲ್ಲಿ ಮೀರ್ ಮುಹಮ್ಮದ್ ಶಾಫಿ ಸಿಲುಕಿದ್ದರು. ಅಲೆ ಅವರನ್ನು ಸೆಳೆದಿದ್ದು, ಈ ವೇಳೆ ಜತೆಗಿದ್ದವರ ಬೊಬ್ಬೆ ಕೇಳಿ ಅಲ್ಲಿಗೆ ತಲುಪಿದ ಮೊಗ್ರಾಲ್ ನಾಂಗಿ ಕಡಪ್ಪುರದ ಮೀನು ಕಾರ್ಮಿಕ ರಫೀಕ್ ತಕ್ಷಣ ಸಮುದ್ರಕ್ಕಿಳಿದು ಮೀರ್ ಮುಹಮ್ಮದ್ ಶಾಫಿಯನ್ನು ದಡಕ್ಕೆ ತಲುಪಿಸಿದರೂ ಅವರ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಬಳಿಕ ಕುಂಬಳೆ ಸಹಕಾರಿ ಆಸ್ಪತ್ರೆಗೆ ತಲುಪಿಸಿದ ಮೃತದೇಹವನ್ನು ಪೊಲೀಸರು ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಬೆಂಗಳೂರಿಗೆ ಕೊಂಡೊಯ್ಯಲಾಗುವುದು.
ಮೃತರು ಪತ್ನಿ ಜಬೈರಿಯಾ, ಮಕ್ಕಳಾದ ಅನಿಯ, ಹಾರುನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.