ಪ್ರಹಸನವಾಗುತ್ತಿದೆ ಶುಚಿತ್ವ ಕೇರಳ, ಸುಂದರ ಕೇರಳ: ತ್ಯಾಜ್ಯ ತುಂಬಿ ತುಳುಕುತ್ತಿರುವ ಆದೂರು ಬಳಿಯ ತೋಡು

ಮುಳ್ಳೇರಿಯ: ಶುಚಿತ್ವ ಕೇರಳ, ಸುಂದರ ಕೇರಳವನ್ನಾಗಿ ಮಾಡಲು ಹೆಣಗಾಡುತ್ತಿರುವ ಮಧ್ಯೆ ಇನ್ನು ಕೂಡಾ ತ್ಯಾಜ್ಯಗಳ ಬಗ್ಗೆ ಗಂಭೀರವಾಗಿ ಚಿಂತಿಸದವರು ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ. ಕಾನಕ್ಕೋಡು ಕೋಳಿಕ್ಕಾಲು ಬಳಿಯಿಂದ ಆರಂಭಗೊಳ್ಳುವ ತೋಡು ಪೂತಪ್ಪಲ, ನಾವುಂಗಾಲ್, ಮೇಗಿನಮನೆ, ಮಲ್ಲಾವರ ಮೂಲಕ ಸಾಗಿ ಆದೂರು ಮಸೀದಿ ಬಳಿಯಲ್ಲಿ ಪಯಸ್ವಿನಿ ಹೊಳೆಯನ್ನು ಸೇರುತ್ತಿದೆ. ಈ ತೋಡಿನ ಬದಿಗಳಲ್ಲಾಗಿ ಹಲವು ಮನೆಗಳಿವೆ, ಆದರೆ ಈ ಮನೆಗಳ ಮುಂಭಾಗ ತೋಡಿನ ಬದಿಯಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ಪರಿಸರಕ್ಕೆ ಹಾನಿ ಉಂಟುಮಾಡುತ್ತಿದ್ದು, ಮನೆಮಂದಿಗೆ ಸಮಸ್ಯೆಯಾಗುತ್ತಿದೆ.

ಎಲ್ಲೆಂದರಲ್ಲಿ ಬಿಸಾಡುವ ಜಾಯಮಾನ ಇನ್ನೂ ಕಡಿಮೆಯಾಗದ ಮಂದಿ  ಪ್ಲಾಸ್ಟಿಕ್ ತ್ಯಾಜ್ಯ ಸಹಿತ ಉಪಯೋಗಶೂನ್ಯ ಎಲ್ಲಾ ವಸ್ತುಗಳನ್ನು ಈ ತೋಡಿಗೆ ಎಸೆಯುತ್ತಿದ್ದಾರೆ. ಇದರಲ್ಲಿ ಹಾಸಿಗೆ, ಬಟ್ಟೆಬರೆ, ಪ್ಲಾಸ್ಟಿಕ್ ಬಾಟ್ಲಿ, ಹೆಚ್ಚೇಕೆ ಪ್ಯಾಂಪರ್ಸ್ ಕೂಡಾ ಒಳಗೊಂಡಿದೆ. ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಈ ತೋಡನ್ನು ಸರಕಾರಿ ಮಟ್ಟದಲ್ಲಿ ಶುಚೀಕರಣಗೊಳಿಸಲಾಗುತ್ತಿತ್ತು. ಈ ವೇಳೆ ಶಾಸಕರು, ಜನಪ್ರತಿನಿಧಿಗಳು ಸಹಿತ ಹೆಚ್ಚಿನೆಲ್ಲ ಮಂದಿ ಭಾಗವಹಿಸುವ ಸಭೆಯನ್ನು ನಡೆಸಲಾಗುತ್ತಿತ್ತು. ಉದ್ಯೋಗ ಖಾತರಿ ಕಾರ್ಮಿಕರು ಸಹಿತ ಸ್ಥಳೀಯರು ತೋಡಿನ ಕಸಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡುತ್ತಿದ್ದರು. ಅಲ್ಲದೆ ತ್ಯಾಜ್ಯಗಳ ಬಗ್ಗೆ ಗಂಟೆಗಳ ಕಾಲ ಜನರಿಗೆ ಉಪದೇಶ ನೀಡುತ್ತಿದ್ದರು. ಆದರೆ  ಇದೆಲ್ಲವೂ ನೀರಿನಲ್ಲ್ಲಿಟ್ಟ ಹೋಮದಂತಾಗಿದೆ.  ‘ನಾಯಿ ಬಾಲ ಡೊಂಕೇ’ ಎಂಬ ಸ್ಥಿತಿ ನಿರ್ಮಾಣವಾಗಿದೆ. ತೋಡಿನ ಆರಂಭದಿಂದ ಹಿಡಿದು ಅಂತ್ಯದವರೆಗೆ ಈಗ ಅಲ್ಲಲ್ಲಿ ವಿವಿಧ ರೀತಿಯ ತ್ಯಾಜ್ಯ ಸಿಲುಕಿಕೊಂಡಿದೆ. ಜೊತೆಗೆ ಶಾಲಾ ಮಕ್ಕಳು ತಿಂದು ಬಿಸಾಡುವ ವಿವಿಧ ರೀತಿಯ ತಿಂಡಿಯ ಕವರುಗಳು, ಬಾಟ್ಲಿಗಳು ಕೂಡಾ ತೋಡಿನ ನೀರಿನಲ್ಲಿ ತೇಲಿ ಬರುತ್ತಿದೆ.

ಪ್ಲಾಸ್ಟಿಕ್ ತ್ಯಾಜ್ಯ, ಪರಿಸರ ಮಲಿನೀಕರಣದ ಬಗ್ಗೆ ಮಕ್ಕಳಲ್ಲಿ ಪ್ರಥಮವಾಗಿ ತಿಳುವಳಿಕೆ ಮೂಡಿ ಸಬೇಕಾದ ಅಗತ್ಯವಿದೆ. ಶಾಲೆಗಳಲ್ಲಿ, ಹೆತ್ತವರು, ವ್ಯಾಪಾರಿಗಳು, ಮಕ್ಕಳಲ್ಲಿ ತ್ಯಾಜ್ಯದ ಬಗ್ಗೆ ಸರಿಯಾದ ರೀತಿಯಲ್ಲಿ ತಿಳುವಳಿಕೆ ಮೂಡಿಸಬೇಕು. ಪ್ಲಾಸ್ಟಿಕ್ ಕವರು, ಬಾಟ್ಲಿ, ಇತರ ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಬಿಸಾಡದೆ  ಬ್ಯಾಗ್‌ನಲ್ಲಿರಿ ಸಿಕೊಂಡು ಹೋಗಿ ಮನೆಯಲ್ಲಿ ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆ ಯರಿಗೆ ನೀಡಬೇಕೆಂದು ತಿಳಿಸಬೇಕು. ಹೆತ್ತವರು ಕೂಡಾ ತ್ಯಾಜ್ಯ ವಿಲೇವಾರಿ ಯಲ್ಲಿ ಸರಿಯಾದ ರೀತಿಯನ್ನು ಅನುಸರಿಸಬೇಕಾಗಿದೆ. ಇಲ್ಲದಿದ್ದರೆ ಯಾರು ಎಷ್ಟು ಉಪದೇಶಿಸಿದರೂ, ಎಷ್ಟೇ  ಸ್ವಚ್ಛಗೊಳಿಸಿದರೂ ತ್ಯಾಜ್ಯವನ್ನು ಇಲ್ಲದಂತೆ ಮಾಡಲು ಅಸಾಧ್ಯ. ಎಲ್ಲ ಜನರು ತಮ್ಮ ಮನೆಯಿಂದಲೇ ಪರಿಸರ ಮಲಿನೀಕರಣ ವಿರುದ್ಧ ಪಾಠ ಆರಂಭ ಸಿದರೆ ಮಾತ್ರವೇ ನಮ್ಮ ಪರಿಸರವನ್ನು, ಜಲಮೂಲಗಳನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಅದಕ್ಕೆ ಸಮಾಜ ಶತಪ್ರಯತ್ನ ಮಾಡಬೇಕಾಗಿದೆ.

Leave a Reply

Your email address will not be published. Required fields are marked *

You cannot copy content of this page