ಪ್ರಾಕೃತಿಕ ವಿಕೋಪಕ್ಕೆ ಜಿಲ್ಲೆಯಲ್ಲಿ ಇಬ್ಬರು ಬಲಿ
ಕಾಸರಗೋಡು: ರಾಜ್ಯದಲ್ಲಿ ಸುರಿಯುತ್ತಿರುವ ಬೇಸಿಗೆ ಜಡಿಮಳೆ ಇನ್ನೂ ಕೆಲವು ದಿನಗಳ ತನಕ ಮುಂದುವರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಭಾರೀ ಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪದಿಂದ ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರು ನಿನ್ನೆ ಪ್ರಾಣ ಕಳೆದುಕೊಂಡಿದ್ದಾರೆ.
ಹೊಸದುರ್ಗ ತಾಲೂಕಿನ ಮಡಿಕೈ ಪುದಿಯಕಂಡದ ರೈತ ಕೀಲತ್ ಬಾಲನ್ (79) ಮತ್ತು ಚೆರುವತ್ತೂರು ಅಚ್ಚಾಂತುರುತ್ತಿನ ವಳಪ್ಪಿಲ್ ವೆಳ್ಳಿಚ್ಚಿ (81) ಪ್ರಾಕೃತಿಕ ವಿಕೋಪಕ್ಕೆ ಬಲಿಯಾದ ದುರ್ದೈವಿಗಳು.
ಇದರಲ್ಲಿ ಬಾಲನ್ ನಿನ್ನೆ ಅಪರಾಹ್ನ ತಮ್ಮ ಮನೆ ಪಕ್ಕದ ಅಡಿಕೆ ತೋಟಕ್ಕೆ ಹೋದಾಗ ಅವರ ಮೇಲೆ ಸಿಡಿಲು ಬಡಿದಿದೆ. ತೋಟಕ್ಕೆ ಹೋದ ಬಾಲನ್ ತಡವಾದರೂ ಮನೆಗೆ ಹಿಂತಿರುಗದೇ ಇರುವುದನ್ನು ಗಮನಿಸಿದ ಮನೆಯವರು ಶೋಧ ಆರಂಭಿಸಿದಾಗ ತೋಟದಲ್ಲಿ ಬಾಲನ್ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬಳಿಕ ಮೃತದೇಹವನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಸಿಪಿಎಂನ ಮೂಲೆಯಿಲ್ ಬ್ರಾಂಚ್ ಸದಸ್ಯರು ಹಾಗೂ ಮಾಜಿ ಬ್ರಾಂಚ್ ಕಾರ್ಯದರ್ಶಿಯೂ ಆಗಿರುವ ಮೃತ ಬಾಲನ್ ಕಾಕಾಟ್ಟ್ ಕೀಲತ್ತ್ ಕುಂಞಿರಾಮ- ಮುತ್ತಾಣಿ ದಂಪತಿ ಪುತ್ರನಾಗಿದ್ದಾರೆ. ಇವರ ಪತ್ನಿ ಗಿರಿಜ ಈ ಹಿಂದೆ ನಿಧನ ಹೊಂದಿದ್ದರು. ಮೃತರು ಮಕ್ಕಳಾದ ಗಿರೀಶ್, ರತೀಶ್, ಸುಧೀಶ್, ಸೊಸೆಯಂದಿರಾದ ಅಜಿತ, ಲೀನ, ಸಹೋದರ ಸಹೋದರಿಯರಾದ ದಾಮೋದರನ್ ಕೀಲತ್, ಶಾರದ, ತಂಗಮಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ವೆಳ್ಳಚ್ಚಿಯವರು ಕಳೆದ ಮೂರು ತಿಂಗಳಿಂದ ಚೆರುವತ್ತೂರು ಮೀನ್ ಕಡವಿನ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದರು. ಇವರು ನಿನ್ನೆ ಮಧ್ಯಾಹ್ನದ ದಿಢೀರ್ ಆಗಿ ನಾಪತ್ತೆಯಾಗಿದ್ದರು. ಅದರಿಂದ ಗಾಬರಿಗೊಂಡ ಮನೆಯವರು ಶೋಧ ಆರಂಭಿಸಿದಾಗ ಅಲ್ಲೇ ಮನೆ ಪಕ್ಕದ ಹೊಳೆಯಲ್ಲಿ ವೆಳ್ಳಚ್ಚಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ವಿಷಯ ತಿಳಿದ ಚಂದೇರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಕಣ್ಣೂರು ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಯಿತು.
ದಿ| ಅಂಬುಂಞಿಯವರ ಪತ್ನಿಯಾಗಿರುವ ಮೃತ ವೆಳ್ಳಚ್ಚಿ, ಮಕ್ಕಳಾದ ಯಶೋಧ, ಸುಭದ್ರ, ಅಳಿಯ ಸುಕುಮಾರನ್, ಸಹೋದರ ಸಹೋದರಿಯರಾದ ರಾಮನ್, ಚಿರುದ, ನಂದಿನಿ, ರೋಹಿಣಿ, ರಾಧಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.