ಫರ್ಹಾಸ್‌ನ ಅಪಘಾತ ಮರಣ:ಎಸ್‌ಐ, ಕುಟುಂಬಕ್ಕೆ ಕೊಲೆ ಬೆದರಿಕೆ; ಸ್ಕೂಟರ್‌ನಲ್ಲಿ ತಲಪಿದ ತಂಡದ ವಿರುದ್ಧ ಕೇಸು ದಾಖಲು

ಕುಂಬಳೆ: ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ಯಲ್ಲಿ ಆರೋಪವಿಧೇಯರಾದ ಎಸ್‌ಐ, ಅವರ ಕುಟುಂಬಕ್ಕೆ ಕೊಲೆ ಬೆದರಿಕೆ  ಉಂಟಾಗಿದೆ. ಎಸ್‌ಐಯ ಪತ್ನಿಯ ತಂದೆಯ ದೂರಿನಂತೆ ಸ್ಕೂಟರ್‌ನಲ್ಲಿ ತಲುಪಿದ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರೋಪಿಗಳೆಂದು ಶಂಕಿಸುವವರ ಸಿಸಿಟಿವಿ ದೃಶ್ಯಗಳು ಬಹಿರಂಗಗೊಂಡಿದೆ. ಆರೋಪಿ ಗಳಿಗಾಗಿ ತನಿಖೆ ತೀವ್ರಗೊಳಿಸಿ ರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ ಈ ಘಟನೆ ನಡೆದಿದೆ. ವಿದ್ಯಾರ್ಥಿಯ ಸಾವಿಗೆ ಸಂಬಂಧಿಸಿ ಆರೋಪಿತನಾದ ಎಸ್‌ಐ ಹಾಗೂ ಕುಟುಂಬ ಮೊಗ್ರಾಲ್ ಮಾಳಿಯಂ ಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ನೀಲಿ ಬಣ್ಣದ ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಯುವಕರು  ಗೇಟ್‌ನ ಮುಂಭಾಗದಲ್ಲಿ ಸ್ಕೂಟರನ್ನು ನಿಲ್ಲಿಸಿ ಎಸ್‌ಐ ರಜಿತ್‌ರ ಮನೆ ಇದಲ್ಲವೇ ಎಂದು ವಿಚಾರಿಸಿ, ಹೌದೆಂದು ಹೇಳಿದಾಗ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಒಡ್ಡಿರುವುದಾಗಿ ಎಸ್‌ಐಯವರ ಪತ್ನಿಯ ತಂದೆ ಕೊಲ್ಲಂ ಸಿಟಿ ನಿವಾಸಿಯಾದ ಉಣ್ಣಿಕೃಷ್ಣನ್ (೫೭) ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಸ್ಕೂಟರ್‌ನಲ್ಲಿ ತಲುಪಿ ಕೊಲೆ ಬೆದರಿಕೆ ಒಡ್ಡಿರುವುದು ಸಿಸಿ ಟಿವಿ ದೃಶ್ಯದಲ್ಲಿ ಬಹಿರಂಗಗೊಂಡಿದೆ. ಆರೋಪಿಗಳನ್ನು ಸ್ಪಷ್ಟವಾಗಿ ಗುರುತು ಹಿಡಿಯಬಹುದಾದ ರೀತಿಯಲ್ಲಿರುವ ದೃಶ್ಯಗಳು ಲಭಿಸಿರುವುದು ಎಂದು, ಇದರ ಆಧಾರದಲ್ಲಿ ಆರೋಪಿಗಳಿಗೆ ಹುಡುಕಾಟ ತೀವ್ರಗೊಳಿಸಿರುವು ದಾಗಿಯೂ ಪೊಲೀಸರು ತಿಳಿಸಿದ್ದಾರೆ.

ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಮಗುಚಿ ಉಂಟಾದ ಅಪಘಾತದಲ್ಲಿ ಪೇರಾಲ್ ಕಣ್ಣೂರು ನಿವಾಸಿಯಾದ ಮುಹಮ್ಮದ್ ಫರ್ಹಾಸ್ (೧೭) ಓಣಂ ದಿನದಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಮೃತಪಟ್ಟಿದ್ದನು. ವಿದ್ಯಾರ್ಥಿಯ ಮರಣಕ್ಕೆ ಕಾರಣರಾದ ಪೊಲೀಸರ ವಿರುದ್ಧ ಕೊಲೆ ಅಪರಾಧಕ್ಕೆ ಕೇಸು ದಾಖಲಿಸಬೇಕೆಂದು ಆಗ್ರಹಿಸಿ ಯೂತ್ ಲೀಗ್, ಮುಸ್ಲಿಂ ಲೀಗ್, ಸಿಪಿಎಂ, ಪಿಡಿಪಿ, ಎಸ್‌ಡಿಪಿಐ, ಯೂತ್ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು ರಂಗಕ್ಕಿಳಿದಿವೆ. ಈ ಹಿನ್ನೆಲೆಯಲ್ಲಿ ಆರೋಪಿತನಾದ ಎಸ್‌ಐ ರಜಿತ್ ಹಾಗೂ ಇಬ್ಬರು ಸಿವಿಲ್ ಪೊಲೀಸ್ ಆಫೀಸರ್‌ಗಳನ್ನು ಕಾಞಂಗಾಡ್ ಎನ್‌ಎಚ್ ಘಟಕಕ್ಕೆ ವರ್ಗಾವಣೆಗೊಳಿಸಲಾಗಿದೆ. ಇದರ ಬಳಿಕ ಸ್ಕೂಟರ್‌ನಲ್ಲಿ ತಲುಪಿದ ತಂಡ ಎಸ್‌ಐ ಹಾಗೂ ಕುಟುಂಬಕ್ಕೆ ಕೊಲೆ ಬೆದರಿಕೆ ಹೂಡಿದೆ.

Leave a Reply

Your email address will not be published. Required fields are marked *

You cannot copy content of this page