ಫಿಟ್ನೆಸ್ ಸರ್ಟಿಫಿಕೇಟ್ ಇರುವ ಶಾಲಾ ಕಟ್ಟಡ ಅಪಾಯ ಭೀತಿಯಲ್ಲಿ : ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನ ಏಳು ತರಗತಿಗಳಿಂದ ಮಕ್ಕಳ ತೆರವು
ಕುಂಬಳೆ: ತೀವ್ರಗೊಂಡ ಮಳೆಯ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಭದ್ರತೆ ಏರ್ಪಡಿಸುವ ಅಂಗವಾಗಿ ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ ಹೆಂಚು ಹಾಸಿದ ಕಟ್ಟಡಗಳಿಂದ ವಿದ್ಯಾರ್ಥಿಗಳನ್ನು ಶಾಲಾ ಅಧಿಕಾರಿ ಗಳು ತಾತ್ಕಾಲಿಕವಾಗಿ ತೆರವುಗೊಳಿಸಿದ್ದಾರೆ.
ಏಳು ತರಗತಿ ಕೊಠಡಿಗಳಿರುವ ಕಟ್ಟಡಕ್ಕೆ ಹೆಂಚು ಹಾಸಲಾಗಿದೆ. ಈ ಕಟ್ಟಡದಲ್ಲಿ ಭದ್ರತಾ ಸಮಸ್ಯೆ ಇರುವುದರಿಂದ ಆ ತರಗತಿಗಳಿಂದ ವಿದ್ಯಾರ್ಥಿಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ಕಟ್ಟಡಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಇದೆ. ಆದರೆ ಮಳೆ ಸುರಿಯುವ ವೇಳೆ ಕಟ್ಟಡ ಅಪಾ ಯಕ್ಕೀಡಾಗುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳನ್ನು ಸ್ಥಳಾವಕಾಶದ ಅಭಾವವಿದ್ದರೂ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಶಾಲಾ ಅಧ್ಯಾಪಕರು ನಿರ್ಧರಿಸಿದ್ದು, ಇದಕ್ಕೆ ಪಿಟಿಎ ಸಹಕರಿಸಿದೆ.
ಮೊಗ್ರಾಲ್ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ೨೫೦೦ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಇವರಿಗೆ ಬೇಕಾದ ಕಟ್ಟಡ ಸೌಕರ್ಯಗಳಿಲ್ಲ. ಶಾಲಾ ಕಟ್ಟಡಕ್ಕಾಗಿ ಪಿಟಿಎ, ಎಸ್ ಎಂಸಿ ಕಮಿಟಿಗಳು ನಿರಂತರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಈ ಮಧ್ಯೆ ಶಾಲೆಯ ಅಭಿವೃದ್ಧಿ ಫಂಡ್‌ನಲ್ಲಿ ವಂಚನೆ ನಡೆದಿದೆ. ಇದು ಶಾಲೆಯ ದೈನಂದಿನ ಚಟುವಟಿಕೆಗೂ ಬಾಧಿಸಿದೆ. ಈ ಬಗ್ಗೆ ನೀಡಿದ ದೂರಿನಲ್ಲಿ ತನಿಖೆ ನಡೆಯುತ್ತಿದೆ.