ಫ್ಯಾಶನ್‌ಗೋಲ್ಡ್ ವಂಚನೆ ಪ್ರಕರಣ :19.60 ಕೋಟಿ ರೂ.ಗಳ ಆಸ್ತಿ ಜಪ್ತಿ

ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಕೋಲಾಹಲವೆಬ್ಬಿಸಿದ್ದ ಫ್ಯಾಶನ್‌ಗೋಲ್ಡ್ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ) ಪ್ರಸ್ತುತ ಸಂಸ್ಥೆಗೆ ಸೇರಿದ 19.6 ಕೋಟಿ ರೂ.ಗಳ ಆಸ್ತಿ ಜಪ್ತಿ ಮಾಡಿದೆ.

ಫ್ಯಾಶನ್ ಗೋಲ್ಡ್ ಗ್ರೂಪ್ ಕಂಪೆನಿಯ ಚೆಯರ್‌ಮ್ಯಾನ್ ಮಂಜೇಶ್ವರ ಕ್ಷೇತ್ರದ ಮಾಜಿ ಶಾಸಕ ಎಂ.ಸಿ. ಖಮರುದ್ದೀನ್, ಈ ಸಂಸ್ಥೆಯ ಆಡಳಿತ ನಿರ್ದೇಶಕ ಟಿ.ಕೆ. ಪೂಕೋಯಾ ತಂಙಳ್ ಸೇರಿದಂತೆ ಇದರಲ್ಲಿ ಆರೋಪಿಗಳಾಗಿರುವವರ ವಿರುದ್ಧ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಒಟ್ಟು 168 ಪ್ರಕರಣಗಳು ದಾಖಲುಗೊಂಡಿದ್ದು, ಅವುಗಳ ತನಿಖೆಯನ್ನು ಬಳಿಕ ಕ್ರೈಮ್ ಬ್ರಾಂಚ್ ಕೈಗೆತ್ತಿಕೊಂಡಿತ್ತು. ಅದರ ಆಧಾರದಲ್ಲಿ ಇ.ಡಿ. ತನಿಖೆ ಆರಂಭಿಸಿತ್ತು. ಅದರ ಮುಂದಿನ ಕ್ರಮದಂಗವಾಗಿ ಇ.ಡಿ. ಜಪ್ತಿ ಕ್ರಮ ಕೈಗೊಂಡಿದೆ.

ಉತ್ತಮ ರೀತಿಯ ಲಾಭಾಂಶ ನೀಡುವ ಭರವಸೆ ನೀಡಿ ಹಲವರಿಂದ ಶೇರ್ ಮೂಲಕ ಠೇವಣಿ ಪಡೆದು ನಂತರ ಅವರನ್ನು ವಂಚನೆಗೈದಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಕ್ರೈಮ್ ಬ್ರಾಂಚ್ ವಿಭಾಗ ಇಷ್ಟೊಂದು ಪ್ರಕರಣಗಳ ತನಿಖೆ ನಡೆಸಿತ್ತು.  ಒಟ್ಟು ೨೦ ಕೋಟಿ ರೂ.ಗಳ ವಂಚನೆ ನಡೆದಿರುವುದಾಗಿ ಕ್ರೈಮ್ ಬ್ರಾಂಚ್ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸಲಾಗುವುದೆಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page