ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ: ತಂಙಳ್, ಖಮರುದ್ದೀನ್ರ ಸೊತ್ತುಗಳ ಮುಟ್ಟುಗೋಲು ಕ್ರಮ ಅಂತಿಮ ಹಂತದಲ್ಲಿ
ಕಾಸರಗೋಡು: ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣದಲ್ಲಿ ಕಂಪೆನಿಯ ಹಾಗೂ ಆರೋಪಿಗಳ ಸೊತ್ತುಗಳನ್ನು ಮುಟ್ಟುಗೋಲು ಹಾಕಿ ಕೊಳ್ಳಲಿರುವ ಸರಕಾರದ ಆದೇಶವನ್ನು ಜ್ಯಾರಿಗೊಳಿ ಸುವ ಕ್ರಮ ಅಂತಿಮ ಹಂತದಲ್ಲಿದೆ. ಕಣ್ಣೂರು ಜಿಲ್ಲಾಧಿಕಾರಿ ಯವರ ನೇತೃತ್ವದಲ್ಲಿ ಇದಕ್ಕೆ ಬೇಕಾದ ಕ್ರಮ ಮುಂದುವರಿಯುತ್ತಿದೆ.
ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ರಾಜ್ಯ ಮಟ್ಟದ ಕಾಂಪಿಟೆಂಟ್ ಅಧಿಕಾರಿಯಾದ ಫಿನಾನ್ಸ್ ಸೆಕ್ರೆಟರಿ ಸಂಜಯ್ ಎಂ. ಕೌಲ್ ತಿಂಗಳುಗಳ ಹಿಂದೆ ಆದೇಶ ಹೊರಡಿಸಿದ್ದರು. ಕಂಪೆನಿಯ ಮೆನೇಜಿಂಗ್ ಡೈರೆಕ್ಟರ್ ಹಾಗೂ ಮುಸ್ಲಿಂ ಲೀಗ್ ನೇತಾರನಾಗಿದ್ದ ಚಂದೇರದ ಟಿ.ಕೆ. ಪೂಕೋಯ ತಂಙಳ್, ಕಂಪೆನಿಯ ಚೆಯರ್ಮೆನ್ ಹಾಗೂ ಮಾಜಿ ಶಾಸಕನಾದ ಎಂ.ಸಿ. ಖಮರುದ್ದೀನ್ ಎಂಬಿವರ ಸೊತ್ತುಗಳನ್ನು ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಕಾನೂನು ಪ್ರಕಾರ ಮುಟ್ಟು ಗೋಲು ಹಾಕುವಂತೆ ಆದೇಶ ಹೊರ ಡಿಸಲಾಗಿದೆ. ಎಂ.ಸಿ. ಖಮರುದ್ದೀನ್, ಪೂಕೋಯ ತಂಙಳ್ ಎಂಬಿವರ ಹೆಸರಲ್ಲಿ ಪಯ್ಯನ್ನೂರು ಪೇಟೆಯಲ್ಲಿರುವ ನಾಲ್ಕು ಕೊಠಡಿಗಳುಳ್ಳ ಫ್ಯಾಶನ್ ಓರ್ನಮೆಂಟ್ಸ್ ಜ್ಯುವೆಲ್ಲರಿ ಕಟ್ಟಡ, ಬೆಂಗಳೂರು ಸಿಲಿಕುಂಡೆ ವಿಲ್ಲೇಜ್ನಲ್ಲಿ ಪೂಕೋಯ ತಂಙಳ್ರ ಹೆಸರಿನಲ್ಲಿ ಖರೀದಿಸಿದ ಒಂದು ಎಕ್ರೆ ಭೂಮಿ, ಈ ಹಿಂದೆ ಮಾರಾಟಗೈದ ಉಮರ್ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿಗಾಗಿ ಎಂ.ಸಿ. ಖಮರುದ್ದೀನ್ ಹಾಗೂ ಪೂಕೋಯ ತಂಙಳ್ರ ಹೆಸರಿನಲ್ಲಿ ಕಾಸರಗೋಡು ನಗರದಲ್ಲಿ ಖರೀದಿಸಿದ ಭೂಮಿ ಎಂಬಿವುಗಳನ್ನು ವಶಪಡಿಸಿ ಕೊಳ್ಳಲಿರುವ ಕ್ರಮ ಅಂತಿಮ ಹಂತ ದಲ್ಲಿದೆ. ಪೂಕೋಯ ತಂಙಳ್ರ ಹೆಸರಲ್ಲಿ ಮಾಣಿಯಾಟ್ ವಿಲ್ಲೇಜ್ ನಲ್ಲಿರುವ ೧೭.೨೯ ಸೆಂಟ್ಸ್ ಸ್ಥಳ, ಖಮ ರುದ್ದೀನ್ರ ಹೆಸರಿನಲ್ಲಿ ಉದಿನೂರು ವಿಲ್ಲೇಜ್ನಲ್ಲಿರುವ ೧೭ ಸೆಂಟ್ ಸ್ಥಳ, ಪತ್ನಿಯ ಹೆಸರಿನಲ್ಲಿರುವ ೨೩ ಸೆಂಟ್ ಸ್ಥಳ ಈ ಹಿಂದೆ ಮುಟ್ಟುಗೋಲು ಹಾಕಿಕೊಂಡಿರುವ ಸೊತ್ತುಗಳಲ್ಲಿ ಒಳಗೊಂಡಿದೆ. ಪೂಕೋಯ ತಂಙಳ್, ಎಂ.ಸಿ. ಖಮರುದ್ದೀನ್ ಎಂಬಿವರ ಹೆಸರಲ್ಲಿ ಚೆರುವತ್ತೂರು, ಕಯ್ಯೂರು, ತೃಕ್ಕರಿಪುರ ಎಸ್ಬಿಐ ಶಾಖೆಗಳು, ಚೆರುವತ್ತೂರು ಯೂನಿಯನ್ ಬ್ಯಾಂಕ್ ಶಾಖೆ, ಕೆನರಾ ಬ್ಯಾಂಕ್ ಕಾಲಿಕ್ಕಡವ್ ಶಾಖೆ ಎಂಬಿಡೆಗಳಲ್ಲಿರುವ ಠೇವಣಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ಬಡ್ಸ್ ಆಕ್ಟ್ ಪ್ರಕಾರ ಅಪರಾಧ ಕೃತ್ಯದ ಮೂಲಕ ಗಳಿಸಿದ ಸೊತ್ತುಗಳು ಮಾತ್ರವಲ್ಲ ಪರಂಪರಾಗತವಾಗಿ ಲಭಿಸಿದ ಸೊತ್ತುಗಳನ್ನು ಠೇವಣಿದಾರರ ಬಾಧತೆ ತೀರಿಸಲು ಉಪಯೋಗಿಸಬಹುದೆಂಬ ಕಾನೂನಿನ ಆಧಾರದಲ್ಲಿ ಭೂಮಿಯನ್ನು ಮುಟ್ಟುಗೋಲು ಹಾಕಲು ಕ್ರಮ ಉಂಟಾಗಿದೆ. ಇದೇ ವೇಳೆ ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣದಲ್ಲಿ ೧೬೮ ಕೇಸುಗಳನ್ನು ದಾಖಲಿಸಿಕೊಳ್ಳ ಲಾಗಿದೆ. ಈ ಕೇಸುಗಳನ್ನು ಈಗ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿದ್ದರೂ ಒಂದು ಕೇಸಿನಲ್ಲಿ ಕೂಡಾ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಇದಕ್ಕಿರುವ ಕೊನೆಯ ಹಂತದ ಸಿದ್ಧತೆ ಈಗ ನಡೆಯುತ್ತಿದೆ.